ಪಡಿತರ ಅಕ್ಕಿ ಕಳ್ಳಸಾಗಣೆ ಕಠಿಣ ಕ್ರಮ ಕೈಗೊಳ್ಳಿ: ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ತಾಕೀತು

| Published : Oct 19 2025, 01:02 AM IST

ಪಡಿತರ ಅಕ್ಕಿ ಕಳ್ಳಸಾಗಣೆ ಕಠಿಣ ಕ್ರಮ ಕೈಗೊಳ್ಳಿ: ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಸಾಮಗ್ರಿಗಳ ವಿತರಣೆಗೂ ಮುನ್ನ ಅದರ ಗುಣಮಟ್ಟ ಪರಿಶೀಲಿಸಬೇಕು.

ಹೊಸಪೇಟೆ: ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಧಾನ್ಯಗಳನ್ನು ಮಾರಾಟಕ್ಕೆ ಅವಕಾಶವಿರುವುದಿಲ್ಲ. ಆಹಾರ ಸಾಮಗ್ರಿಗಳ ವಿತರಣೆಗೂ ಮುನ್ನ ಅದರ ಗುಣಮಟ್ಟ ಪರಿಶೀಲಿಸಬೇಕು. ಅನ್ನಭಾಗ್ಯ ಯೋಜನೆ ನಾಮಫಲಕವನ್ನು ಪಡಿತರ ವಿತರಣೆ ಕೇಂದ್ರಗಳಲ್ಲಿ ಅಳವಡಿಸಬೇಕು. ಕೆಲ ಜನರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮತ್ತು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ದೂರುಗಳು ವರದಿಯಾಗಿದೆ. ರಾತ್ರಿ ವೇಳೆ ಹೊಸಪೇಟೆ ಚಿತ್ತವಾಡ್ಗಿ ಭಾಗದಲ್ಲಿ ಪಡಿತರ ಅಕ್ಕಿ ಸಾಗಣೆ ಮಾಡಲಾಗುತ್ತಿದೆ ಎಂಬ ದೂರು ಬಂದಿದೆ. ಆದ್ದರಿಂದ ಅಧಿಕಾರಿಗಳು ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.

ಆಹಾರ ಇಲಾಖೆ ಉಪನಿರ್ದೇಶಕ ರಿಯಾಜ್ ಅಹ್ಮದ್ ಪ್ರತಿಕ್ರಿಯಿಸಿ, ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಕಳ್ಳ ಸಾಗಣೆ ಮಾಡುವವರ ವಿರುದ್ದ 31 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಚಿತ್ತವಾಡ್ಗಿಯಲ್ಲಿ ನಡೆಯುವ ಅಕ್ರಮದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗದಿರುವ ಅರ್ಜಿಗಳನ್ನು ಪರಿಶೀಲಿಸಿ, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಮುಂದೆಯೂ ಅದೇ ರೀತಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಜೊತೆಗೆ ತಾಲೂಕುವಾರು ಸಭೆ ಮಾಡಬೇಕು. ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮಾಲೀಕರ ಜತೆಗೆ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ವಿತರಣೆ ಮಾಡುವಂತೆ ತಿಳಿಸಬೇಕು.

ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ಮತ್ತು ಶೌಚಾಲಯದ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಯ ಸದಸ್ಯರು ಮಾತನಾಡಿ ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು . ಹುಣ್ಣಿಮೆ ಮತ್ತು ಅಮಾವ್ಯಾಸೆಯಂದು ಧಾರ್ಮಿಕ ಸ್ಥಳಗಳಿಗೆ ತೆರಳುವ ಬಸ್‌ಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಸರ್ಕಾರಕ್ಕೆ ಜಿಲ್ಲೆಗೆ ಹೊಸ ಬಸ್‌ಗಳನ್ನು ನೀಡುವಂತೆ ಮನವಿ ಸಲ್ಲಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಎಸ್.ಶ್ವೇತಾ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 2,98,543 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಜುಲೈ ಮಾಹೆಯ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ಮೂರು ದಿನದೊಳಗೆ ಡಿಬಿಟಿ ಮೂಲಕ ಫಲಾನುಭವಿಗಳಿಗೆ ಪಾವತಿಸಲಾಗುತ್ತದೆ. ಅಗಸ್ಟ್ ಮತ್ತು ಸೆಪ್ಟಂಬರ್ ಮಾಹೆ ಹಣವನ್ನು ಅನುದಾನ ಬಿಡುಗಡೆಯ ನಂತರ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಜಿಪಂ ಸಿಇಒ ಅಕ್ರಮ್ ಷಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ಕೆ.ಬಡಾವಲಿ, ಚಂದ್ರಪ್ಪ ಹುಲಿಕಟ್ಟಿ, ಕೆ.ಎಸ್. ಶಾಂತನಗೌಡ, ಎಚ್.ಜಂದಿಸಾಹೇಬ್, ಸದಸ್ಯರಾದ ಭಾಗ್ಯಲಕ್ಷ್ಮೀ ಭರಾಡೆ, ಎಸ್.ಯರಿಸ್ವಾಮಿ, ವೆಂಕಟರಮಣ ಡಿ., ಪ್ರಭಾಕರ್, ಪರುಶುರಾಮ, ಗುರುವಿನ ರವೀಂದ್ರ, ಪಿ.ಟಿ.ಭರತ್‌, ಮಂಜುನಾಥ, ಶೇಕ್ ಮಹಮ್ಮದ್ ಜಿಲಾನ್, ಅನಿಲ್ ಕುಮಾರ ಹೊಸಮನಿ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸತೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಪಂ ಸಿಬ್ಬಂದಿ ಇದ್ದರು.