ಕುಕ್ಕುಂದೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್

| Published : Sep 13 2025, 02:06 AM IST

ಕುಕ್ಕುಂದೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ತಾಲೂಕು ಪಂಚಾಯಿತಿ, ಕಾರ್ಕಳ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮ ನೆರವೇರಿತು.

ಕಾರ್ಕಳ: ರಾಜ್ಯದ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಯ ಅದಾಲತ್‌ಗಳನ್ನು ನಡೆಸಿ ಸಂಪೂರ್ಣ ಅನುಷ್ಠಾನಗೊಳಿಸುವುದೇ ಸರ್ಕಾರದ ಗುರಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ತಾಲೂಕು ಪಂಚಾಯಿತಿ, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಜುನಾಥ ಸಭಾಭವನದಲ್ಲಿ ನಡೆದ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದೆಲ್ಲೆಡೆ ಒಂದು ಕೋಟಿ 24 ಲಕ್ಷ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಬಡವರು, ದೀನ ದಲಿತರು, ಯುವಕರು ಹಾಗೂ ಸಾಮಾನ್ಯ ಜನತೆಗೆ ಕಾಂಗ್ರೆಸ್ ಸರ್ಕಾರ ಆಶಾಕಿರಣವಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.ದೇಶದಲ್ಲಿ ಮೊದಲ ಬಾರಿಗೆ ಇಂದಿರಾ ಗಾಂಧಿ ಮೈಸೂರು ಜಿಲ್ಲೆಯ ಟಿ.ನರಸಿಪುರದಲ್ಲಿ ಅಂಗನವಾಡಿ ಯೋಜನೆ ಜಾರಿಗೆ ತಂದ ವಿಚಾರ ಸ್ಮರಿಸಿಕೊಂಡ ಸಚಿವೆ, ಅಂಗನವಾಡಿಗಳ ಮೂಲಕ ಬಡವರ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಉತ್ತಮ ಆರೋಗ್ಯ ಲಭ್ಯವಾಗುತ್ತಿದೆ. ಮಕ್ಕಳು ದಿಟ್ಟವಾಗಿ ಬೆಳೆಯಬೇಕು, ಅವರು ದೇಶದ ಭವಿಷ್ಯದ ಅಸ್ತಿಯಾಗಬೇಕು ಎಂದರು.ತಾಂತ್ರಿಕ ತೊಂದರೆಯಿಂದ 2 ಲಕ್ಷ ಜನರಿಗೆ ಯೋಜನೆಗಳಲ್ಲಿ ತೊಂದರೆ ಉಂಟಾಗಿದ್ದರೂ, ಈಗಾಗಲೇ 50 ಸಾವಿರ ಮಹಿಳೆಯರ ಸಮಸ್ಯೆ ಪರಿಹರಿಸಲಾಗಿದೆ. ಉಳಿದ 1.5 ಲಕ್ಷ ಮಹಿಳೆಯರ ತೊಂದರೆಯನ್ನು ಮುಂದಿನ ತಿಂಗಳು ನಿವಾರಿಸಲಾಗುವುದು ಎಂದರು.ಬಿಜೆಪಿ ಎಷ್ಟೇ ಟೀಕೆ ಮಾಡಿದರೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೋದಿ ಗ್ಯಾರಂಟಿ ದೇಶದಲ್ಲಿ ನಡೆಯುತ್ತಿಲ್ಲ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಮಹಾರಾಷ್ಟ್ರದಲ್ಲಿ ನಕಲು ಮಾಡಿ ಅಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಅಲ್ಲಿ ಮಹಿಳೆಯರಿಗಾಗಿ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ಈ ಬಾರಿ ಕಾರ್ಕಳ ತಾಲೂಕಿಗೆ ರಾಜ್ಯ ಸರ್ಕಾರದಿಂದ 35 ಕೋಟಿ ರು. ಯೋಜನೆ ಒದಗಿಸಲಾಗಿದೆ. ತಾಲೂಕಿನಲ್ಲಿ ಪಂಚಗ್ಯಾರಂಟಿ ಯಶಸ್ವಿಯಾಗಿ ಜಾರಿಯಾಗಿದೆ ಎಂದರು.

ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು, ಮಹಿಳೆಯರಿಗೆ ಶಕ್ತಿ ನೀಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಜಾತಿ-ಮತಗಳೆನ್ನದೆ 36 ಸಾವಿರ ಜನತೆಗೆ ಸವಲತ್ತು ಹಂಚಿಕೆ ಮಾಡಲಾಗಿದೆ ಎಂದರು.ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೇಶ್ ದೇವಾಡಿಗ, ತಾ.ಪಂ. ಇಒ ಪ್ರಶಾಂತ್, ಕುಕ್ಕುಂದೂರು ಗ್ರಾಮ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಮತ್ತಿತರರಿದ್ದರು.ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ತಹಸೀಲ್ದಾರ್‌ ಪ್ರದೀಪ್ ಆರ್. ಸ್ವಾಗತಿಸಿದರು. ದೇವದಾಸ್ ಕೆರೆಮನೆ ನಿರೂಪಿಸಿದರು‌