ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಮಾ. 16ರಂದು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯಲಿದೆ. ಜಿಲ್ಲೆಯ 25000ಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸುತ್ತಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಶಕ್ತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2023ರ ಜೂನ್‌ದಿಂದ ಇದುವರೆಗೆ 4.39 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದು, ಇದರ ಒಟ್ಟೂ ಟಿಕೆಟ್ ಮೌಲ್ಯ ₹125.46 ಕೋಟಿಗೂ ಅಧಿಕವಾಗಿದೆ.
ಗೃಹಜ್ಯೋತಿ ಯೋಜನೆಯಡಿ ಇದುವರೆಗೆ ಜಿಲ್ಲೆಯಲ್ಲಿ 3,78,748 ಕುಟುಂಬಗಳನ್ನು ನೋಂದಣಿ ಮಾಡಿ ಶೇ.100 ಸಾಧನೆ ಮಾಡಲಾಗಿದ್ದು, ಈ ಯೋಜನೆಯಡಿ ಇದುವರೆಗೆ ₹115.59 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ನೋಂದಣಿಗೆ ನಿರಾಸಕ್ತಿ ತೋರಿರುವ ಕುಟುಂಬಗಳನ್ನು ಈ ಯೋಜನೆಗೆ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 2.81 ಲಕ್ಷ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಇದುವರೆಗೆ ₹112.04 ಕೋಟಿ ಜಮಾ ಮಾಡಲಾಗಿದೆ.
ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟೂ 3,46,832 ಅರ್ಹ ಮಹಿಳೆಯರನ್ನು ಗುರುತಿಸಲಾಗಿದ್ದು, ಅವರಲ್ಲಿ ಈವರೆಗೆ 3,14,179 ಮಹಿಳೆಯರನ್ನು ನೊಂದಾಯಿಸಿ ಶೇ. 90.59 ಸಾಧನೆಯನ್ನು ಮಾಡಲಾಗಿದೆ. ₹349.43 ಕೋಟಿಗೂ ಅಧಿಕ ಮೊತ್ತವನ್ನು ಖಾತೆಗೆಳಿಗೆ ಜಮೆ ಮಾಡಲಾಗಿದೆ. ನೋಂದಣಿಗೆ ಬಾಕಿ ಇರುವ ಹಾಗೂ ತಾಂತ್ರಿಕ ಕಾರಣಗಳಿಂದ ಸಮಸ್ಯೆಗೊಳಗಾಗಿರುವ ಮಹಿಳೆಯರನ್ನು ಗುರುತಿಸಿ ಅವರ ಅರ್ಜಿಗಳನ್ನೂ ಯೋಜನೆಯ ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದರು.ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 3440 ಜನ ನೋಂದಣಿ ಮಾಡಿಕೊಂಡಿದ್ದು, ಅರ್ಹ ಪದವೀಧರರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ.ಸಮಾವೇಶದಲ್ಲಿ ಸಿಎಂ ಭಾಗಿ
ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವು ಮಾ. 16ರಂದು ಕಾರವಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.ಮಂಜೂರಿಗೆ ಕ್ರಮ: ಸರ್ಕಾರವು ಐದು ಗ್ಯಾರಂಟಿ ಯೊಜನೆಗಳನ್ನು ಜಾರಿಗೊಳಿಸಿರುವುದು ಮಾತ್ರವಲ್ಲದೇ ಈ ಗ್ಯಾರಂಟಿಗಳು ನಾಡಿನ ಎಲ್ಲ ಜನತೆಗೆ ಸೂಕ್ತವಾಗಿ ತಲುಪಿದೆಯೇ ಎಂಬ ಬಗ್ಗೆ ಪರಿಶೀಲಿಸಲು, ಸಮೀಕ್ಷೆ ಕಾರ್ಯವನ್ನು ಆಯೋಜಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಐದೂ ಗ್ಯಾರಂಟಿ ಯೋಜನೆಗಳ ಒಟ್ಟೂ 13,32,965 ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಯಾವುದೇ ಕುಟುಂಬ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ವಂಚಿತವಾಗಿದಲ್ಲಿ ತಕ್ಷಣವೇ ಅವರಿಗೆ ಸೌಲಭ್ಯಗಳನ್ನು ಮಂಜೂರು ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.