ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವವನ್ನು ಇದೇ ಜನವರಿ 12ರಂದು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ದೋಖಾ ಹಾಗೂ ಜಿಪಂ ಸಿಇಒ ಲವೀಶ್ ಒರಡಿಯಾ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವವನ್ನು ಇದೇ ಜನವರಿ 12ರಂದು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ದೋಖಾ ಹಾಗೂ ಜಿಪಂ ಸಿಇಒ ಲವೀಶ್ ಒರಡಿಯಾ ತಿಳಿಸಿದ್ದಾರೆ.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದ್ದು, ಈ ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಸುವ ಮೂಲಕ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು, ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್), ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರುಗಳನ್ನು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳನ್ನು ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ಈ ಕಾರ್ಯಕ್ರಮ ಆಯೋಜಿಸುವ ಸಂಬಂಧ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಈ ಕೆಳಕಂಡ ಅಧಿಕಾರಿಗಳನ್ನು ನೇಮಿಸಿ ಜಿ.ಪಂ.ಸಿಇಓ ಆದೇಶಿಸಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಜಿಲ್ಲೆ ಮತ್ತು ತಾಲೂಕುವಾರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಸ್ತುತದವರೆಗೂ ಸಾಧಿಸಿರುವ ಪ್ರಗತಿಯ ವಿವರಗಳನ್ನು ವಿಡಿಯೋ ಸಾಕ್ಷ್ಯಚಿತ್ರಗಳ ಮೂಲಕ ಕಾರ್ಯಾಗಾರದ ಸಭೆಯಲ್ಲಿ ಪ್ರದರ್ಶಿಸಲು ಉದ್ದೇಶಿಸಿದೆ.
ಯಾದಗಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಪ್ಪಣ್ಣ ಸಿರಸಗಿ ಅವರು ಹಾಗೂ ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ ಮಂಜುನಾಥ ಅವರು ಜಿಲ್ಲೆಯ ಮಾದರಿ ಗ್ಯಾರಂಟಿ ಫಲಾನುಭವಿಗಳನ್ನು ಗುರುತಿಸಿ, ಗ್ಯಾರಂಟಿ ಕಾರ್ಯಾಗಾರ ಸಭೆಯಲ್ಲಿ ಸನ್ಮಾನಿಸುವುದು, ಹಾಗೂ ಪ್ರತಿ ತಾಲೂಕಿನಿಂದ ಕನಿಷ್ಠ 25 ಮಾದರಿ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುವುದು.ಯಾದಗಿರಿ (MGNREGA) ಜಿಪಂ DIEC ಸಂಯೋಜಕರು, ಹಾಗೂ ಶಹಾಪೂರ (MGNREGA) ತಾಪಂ IEC ಸಂಯೋಜಕರು ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಯಶೋಗಾಥೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ಮತ್ತು ಫಲಾನುಭವಿಗಳ ಅಭಿಪ್ರಾಯಗಳನ್ನು ವಿಡಿಯೋ ಚಿತ್ರಣದ ಮೂಲಕ ಕಾರ್ಯಗಾರ ಸಭೆಯಲ್ಲಿ ಪ್ರದರ್ಶಿಸಬೇಕು.
ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಅವರು ಗ್ಯಾರಂಟಿ ಯೋಜನೆಗಳ ಕುರಿತು ನಾಟಕ ಪ್ರದರ್ಶನ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸೂಚಿಸಲಾಗಿದೆ.(DRDA) ಯೋಜನಾ ನಿರ್ದೇಶಕರು ಹಾಗೂ ಯಾದಗಿರಿ ಜಿಪಂ ಎನ್.ಆರ್.ಎಲ್.ಎಮ್ ತಂಡದವರು ಜಿಲ್ಲೆಯ ಸ್ವಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳು ಸೇರಿದಂತೆ, ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸುವುದು ಹಾಗೂ ಇತರೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.