ಸಾರಾಂಶ
ಚಿಕ್ಕಮಗಳೂರು : ಜಿಲ್ಲಾ ಒಕ್ಕಲಿಗರ ಸಂಘ ನಿರ್ಮಾಣ ಮಾಡಿರುವ ಬೆಳ್ಳಿ ಭವನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಕಾಲ ಗದ್ದಲದ ವಾತಾವರಣ ಉಂಟಾಯಿತು. ಸಚಿವರು ಕ್ಷಮೆಯಾಚಿಸಿದರು.
ಬೆಳ್ಳಿ ಭವನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿ ಬಳಿಕ ಅನ್ಯ ಕಾರ್ಯಕ್ರಮಕ್ಕೆ ತೆರಳುವ ಸಲುವಾಗಿ ಭಾಷಣ ಮಾಡಿದರು, ಆದಿಚುಂಚನಗಿರಿ ಮಠ ಹಾಗೂ ಅವರ ಸೇವಾ ಕಾರ್ಯವನ್ನು ಪ್ರಶಂಸಿದ ಸಚಿವರು ಭಾರತ್ ಜೋಡೊ ಯಾತ್ರೆಯಲ್ಲಿ ಕಂಡು ಬಂದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಎಲ್ಲಾ ವರ್ಗದ ಜನರಿಗೆ ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಬಹಳಷ್ಟು ಮಹಿಳೆಯರು ಸಬಲರಾಗಿದ್ದಾರೆ ಎಂದು ಹೇಳಿದರು.
ಅವರು ಹಾಗೆ ಹೇಳುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ಆಸಿನರಾಗಿದ್ದ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿಯ ಕೆಲವು ಮುಖಂಡರು ಎದ್ದು ನಿಂತು, ರಾಜ್ಯ ಸರ್ಕಾರ ಹಾಗೂ ಗ್ಯಾರಂಟಿ ಬಗ್ಗೆ ಮಾತನಾಡಬೇಡಿ, ಇದು, ರಾಜಕೀಯ ಕಾರ್ಯಕ್ರಮ ಅಲ್ಲ ಎಂದು ಏರು ಧ್ವನಿಯಲ್ಲಿ ಹೇಳುತ್ತಿದ್ದಂತೆ ನಾನು ಇಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನೀವು ಸಹ ರಾಜಕಾರಣ ಮಾಡಬೇಡಿ, ಇದು, ಒಂದು ಸಮುದಾಯದ ಕಾರ್ಯಕ್ರಮ ಗುರುಗಳು ಇದ್ದಾರೆ ಎಂದು ಹೇಳಿ ಸಚಿವರು ತಮ್ಮ ಭಾಷಣ ಮೊಟಕುಗೊಳಿಸಿದರು.
ಆಗ, ಶ್ರೀಗಳು ಮಧ್ಯ ಪ್ರವೇಶಿಸಿ ಮಾತನಾಡಿದ ಬಳಿಕ ಮತ್ತೆ ಭಾಷಣ ಆರಂಭಿಸಿದ ಸಚಿವರು, ಎಲ್ಲಾ ಪಕ್ಷದವರು ಇಲ್ಲಿ ಇದ್ದಾರೆ. ತಪ್ಪಾಗಿ ತಿಳಿದು ಕೊಳ್ಳಬಾರದು. ನೆಹರು ಅವರು ವಾಜಪೇಯಿ ಅವರನ್ನು ಮುಂದೆ ಪ್ರಧಾನಿ ಆಗುತ್ತೀರಾ ಎಂದು ಹೇಳಿದ್ದರು. ವಾಜಪೇಯಿ ಅವರು ಇಂದಿರಾ ಗಾಂಧಿಯವರಿಗೆ ಉಕ್ಕಿನ ಮಹಿಳೆ ಅಂದಿದ್ದರು. ನಿತಿನ್ ಗಡ್ಕರ್ ಅವರ ಕಾಲದಲ್ಲಿ ಉತ್ತಮ ರಸ್ತೆಗಳು ನಿರ್ಮಾಣ ಆಗಿವೆ. ಅವರನ್ನು ಗೌರವಿ ಸುತ್ತೇನೆ. ಪಕ್ಷದ ವಿಚಾರ ಪಾರ್ಟಿ ಆಫೀಸ್‌ನಲ್ಲಿ ಮಾತನಾಡುತ್ತೇನೆ. ತಪ್ಪಾಗಿದ್ದರೆ, ಕ್ಷಮೆ ಕೋರುತ್ತೇನೆ. ಇದು, ಪಕ್ಷದ ವೇದಿಕೆ ಅಲ್ಲ, ಹಾಗಾಗಿ ಇಲ್ಲಿ ಪಕ್ಷದ ವಿಚಾರ ಮಾತನಾಡಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಯಾರೂ ಕೂಡ ಇದು, ಯೋಜನೆಗಳ ಕಾರ್ಯಕ್ರಮ ಎಂದು ಭಾವಿಸಬಾರದು. ನಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಸಚಿವರು ಬಂದಿದ್ದಾರೆ. ಯೋಜನೆಯನ್ನು ಹೇಳಿ ಈ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ಅವರು ಭಾವಿಸಿಲ್ಲ. ನಾವು ಕೂಡ ಭಾವಿಸುವುದು ಬೇಡ. ಅವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಬಂದು ಕಾರ್ಯಕ್ರಮ ಉದ್ಘಾಟಿಸಿ ಹೊರಡುತ್ತಿದ್ದಾರೆ. ಈ ವಿಷಯದಲ್ಲಿ ತಪ್ಪು ತಿಳಿದು ಕೊಳ್ಳುವ ಅವಶ್ಯಕತೆ ಇಲ್ಲ. ಪಕ್ಷದ ವೇದಿಕೆ ಅಲ್ಲ, ಅತಿಥಿಗಳನ್ನು ಗೌರವದಿಂದ ಕಾಣಬೇಕು.- ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ
ಆದಿಚುಂಚನಗಿರಿ ಮಹಾ ಸಂಸ್ಥಾನ
ಸಮಾಜದಲ್ಲಿ ಶೇ. 10 ರಿಂದ 15 ರಷ್ಟು ಮಂದಿ ಮಾತ್ರ ಸಮಾಜ ಘಾತಕ ಶಕ್ತಿಗಳಿದ್ದಾರೆ. ಇಂಥವರು ಯಾವುದೇ ಪಕ್ಷ ಹಾಗೂ ಜಾತಿ ಯವರಾಗಿದ್ದರು ಅವರನ್ನು ಕರೆತಂದು ಠಾಣೆಯಲ್ಲಿ ಕೂರಿಸಿ. ಆಗ ಸಮಾಜದಲ್ಲಿ ತನ್ನಿಂತಾನೆ ಶಾಂತಿ ಸುವ್ಯವಸ್ಥೆ ನೆಲೆಸುತ್ತದೆ. ಠಾಣೆಯಲ್ಲಿ ಅವರಿಗೆ ಟೀ ಕೊಟ್ಟು ಚೆನ್ನಾಗಿ ನೋಡಿಕೊಳ್ಳಿ. ಮಧ್ಯಾಹ್ನವಾದರೆ ಬಿರಿಯಾನಿ ನೀಡಿ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
- ಸಚಿವ ಕೆ.ಜೆ. ಜಾರ್ಜ್