ಗ್ಯಾರಂಟಿ ಯೋಜನೆ ಸಮರ್ಪಕ ಜಾರಿಗೆ ಸಮಿತಿ: ಉಲ್ಲಾಸ

| Published : Mar 21 2024, 01:07 AM IST

ಸಾರಾಂಶ

ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಅನೇಕ ಯೋಜನೆಗಳ ಅನುಷ್ಠಾನದ ಕುರಿತಾಗಿಯೂ ಗಂಭೀರ ನಿಗಾ ವಹಿಸಿ, ಅಗತ್ಯವಿರುವ ಸಲಹೆ- ಸೂಚನೆಯನ್ನು ಸರ್ಕಾರದ ಗಮನಕ್ಕೆ ಶೀಘ್ರವಾಗಿ ತರಲಾಗುವುದು.

ಯಲ್ಲಾಪುರ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ೫ ಗ್ಯಾರಂಟಿ ಯೋಜನೆಗಳು ಸರ್ಕಾರ ರಚನೆಯಾದ ನಂತರ ಅನುಷ್ಠಾನಗೊಳ್ಳುವಲ್ಲಿ ಅಧಿಕಾರಿಗಳ ಜವಾಬ್ದಾರಿಯ ಕೊರತೆಯ ಕಾರಣದಿಂದಾಗಿ ತುಸುಮಟ್ಟಿಗೆ ಹಿನ್ನಡೆಯಾಗಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲೆಂದೇ ಸರ್ಕಾರ ತಾಲೂಕು ಮಟ್ಟದ ಸಮಿತಿ ರಚಿಸಿದ್ದು, ಕೆಲವು ದಿನದಲ್ಲಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯುತ್ತವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಉಲ್ಲಾಸ(ದೇವಿದಾಸ) ಶಾನಭಾಗ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಆಯ್ಕೆಯಾದ ೧೫ ಸದಸ್ಯರ ನೂತನ ಸಮಿತಿಯು ಪ್ರತಿ ಗ್ರಾಪಂಗಳಿಗೂ ತೆರಳಿ, ಅಲ್ಲಿನ ಯಾವ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲ ದೊರಕಿಲ್ಲ? ಏಕೆ ದೊರಕಿಲ್ಲ? ಎಂಬುದರ ಕುರಿತಾಗಿ ಕೂಲಂಕಷ ಪರಿಶೀಲನೆ ನಡೆಸಿ, ಯೋಜನೆಗಳು ಶೀಘ್ರವಾಗಿ ದೊರಕುವ ಕ್ರಮ ಕೈಗೊಳ್ಳುತ್ತದೆ. ಅಲ್ಲದೇ ಇತ್ತೀಚೆಗೆ ಘೋಷಿಸಿದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಅನೇಕ ಯೋಜನೆಗಳ ಅನುಷ್ಠಾನದ ಕುರಿತಾಗಿಯೂ ಗಂಭೀರ ನಿಗಾ ವಹಿಸಿ, ಅಗತ್ಯವಿರುವ ಸಲಹೆ- ಸೂಚನೆಯನ್ನು ಸರ್ಕಾರದ ಗಮನಕ್ಕೆ ಶೀಘ್ರವಾಗಿ ತರಲಾಗುವುದು ಎಂದರು.

ಬಿಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಜಿಲ್ಲಾ ಕಾಂಗ್ರೆಸ್ ಸದಸ್ಯ ಟಿ.ಸಿ. ಗಾಂವ್ಕರ, ತಾಲೂಕು ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಆಯೇಷಾ ಗೊಜನೂರು, ಪ್ರಧಾನ ಕಾರ್ಯದರ್ಶಿ ಅನೀಲ ಮರಾಠ, ಗ್ಯಾರಂಟಿ ಸಮಿತಿಯ ಸದಸ್ಯರಾದ ಮುಷರತ್ ಖಾನ್, ಎಂ.ಕೆ. ಭಟ್ಟ, ಫಕೀರ ಹರಿಜನ, ವಿ.ಎಸ್. ಭಟ್ಟ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.