ಸಾರಾಂಶ
ರೋಣ: ಚುನಾವಣೆ ಪೂರ್ವದಲ್ಲಿ ನುಡಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾ. 2ರಂದು ಬೆಳಗ್ಗೆ 11 ಗಂಟೆಗೆ ರೋಣ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರೋಣ ಮತ್ತು ಗಜೇಂದ್ರಗಡ ತಾಲೂಕು ಫಲಾನುಭವಿಗಳ ಸಮಾವೇಶ ಜರುಗುವ ಸ್ಥಳ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಉಚಿತ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಅಧಿಕಾರಕ್ಕೆ ಬಂದ ಎರಡ್ಮೂರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಹಿಂದಿನ ಯಾವುದೇ ಸರ್ಕಾರದ ಯಾವುದೇ ಯೋಜನೆಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಈ ಯೋಜನೆಗಳ ಯಶಸ್ಸು ಕಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕರು ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಈ ಕ್ರಮ ಸರಿಯಲ್ಲ. ಇಂತಹ ಟೀಕೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿಯೇ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಬಾಳಕರ, ಕಾರ್ಮಿಕ ಸಚಿವ ಸಂತೋಷ ಲಾಡ್ , ರಾಜ್ಯ ಸರ್ಕಾರದ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ರೋಣ ಮತ್ತು ಗಜೇಂದ್ರಗಡ ತಾಲೂಕಿನ ಎಲ್ಲಾ ಫಲಾನುಭವಿಗಳು, ಕಾರ್ಯಕರ್ತರು, ಅಭಿಮಾಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಸುಮಾರು 24 ಸಾವಿರ ಜನ ಸೇರುವ ಸಾಧ್ಯತೆಯಿದೆ ಎಂದರು.
ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ: ಫಲಾನುಭವಿಗಳ ಸಮಾವೇಶದ ಜೊತೆಗೆ ರೋಣ ಮತಕ್ಷೇತ್ರದಲ್ಲಿ ಇಂಧನ ಸಾಮರ್ಥ್ಯ ವೃದ್ಧಿಗಾಗಿ ರೋಣ ನಗರದಲ್ಲಿ ₹ 120 ಕೋಟಿ ವೆಚ್ಚದಲ್ಲಿ 220/110 ಕೆವಿ ವಿದ್ಯತ್ ವಿತರಣಾ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ, ರೋಣ, ಗಜೇಂದ್ರಗಡ ಮತ್ತು ನರೇಗಲ್ ಪಟ್ಟಣಗಳಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಗಜೇಂದ್ರಗಡ ನಗರದ ಇಂಗು ಕೆರೆಯ ಪಕ್ಕ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವಲ್ಲಿ ₹ 6 ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.ಈ ವೇಳೆ ತಹಸೀಲ್ದಾರ್ ನಾಗರಾಜ ಕೆ., ರೋಣ ತಾಪಂ ಇಒ ರವಿ ಎ.ಎನ್., ಗಜೇಂದ್ರಗಡ ತಾಪಂ ಇಒ ಡಾ. ಡಿ. ಮೋಹನ, ದಶರಥ ಗಾಣಿಗೇರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ನವಲಗುಂದ, ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ ವ್ಹಿ.ಬಿ. ಸೋಮನಕಟ್ಟಿಮಠ, ಯೂಸೂಫ್ ಇಟಗಿ, ಬಿ.ಎಸ್. ಕರಿಗೌಡ್ರ, ಪುರಸಭೆ ಮಾಜಿ ಅಧ್ಯಕ್ಷ ಶಫೀಕ್ ಮೂಗನೂರ, ಪುರಸಭೆ ಸದಸ್ಯರಾದ ಗದಿಗೆಪ್ಪ ಕಿರೇಸೂರ, ದಾವಲಸಾಬ ಬಾಡಿನ, ಆನಂದ ಚಂಗಳಿ, ಮಲ್ಲು ರಾಯನಗೌಡ್ರ ಮುಂತಾದವರಿದ್ದರು.