ಬಡವರಿಗೆ ಗ್ಯಾರಂಟಿ ಯೋಜನೆ ಅಬಾಧಿತ: ಶಾಸಕ ಬೇಳೂರು ಸ್ಪಷ್ಟನೆ

| Published : Jun 19 2024, 01:03 AM IST

ಸಾರಾಂಶ

ಗ್ಯಾರಂಟಿಗಾಗಿ ೫೫,೦೦೦ ಕೋಟಿ ರು. ಮೀಸಲಿಡಲಾಗಿದೆ. ಪೆಟ್ರೋಲ್, ಡಿಸೆಲ್ ದರ ಹೆಚ್ಚಳ ಮಾಡಿರುವುದು ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದಲೇ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಮರ್ಥಿಸಿಕೊಂಡರು.

ಕನ್ನಡಪ್ರಭ ವಾರ್ತೆ ಸಾಗರ

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಐದು ವರ್ಷ ಬಡವರಿಗೆ ಅಬಾಧಿತವಾಗಿ ಐದೂ ಗ್ಯಾರಂಟಿಗಳು ತಲುಪಬೇಕು ಎನ್ನುವುದು ನನ್ನ ಅಭಿಲಾಷೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿಲ್ಲ. ಎಲ್ಲ ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನಗಳು ಎಂದಿನಂತೆ ಬರುತ್ತಿದೆ ಎಂದು ಹೇಳಿದರು.

ಸಂಪನ್ಮೂಲ ಕ್ರೋಢೀಕರಣ: ಗ್ಯಾರಂಟಿಗಾಗಿ ೫೫೦೦೦ ಕೋಟಿ ರು. ಮೀಸಲಿಡಲಾಗಿದೆ. ಪೆಟ್ರೋಲ್, ಡಿಸೆಲ್ ದರ ಹೆಚ್ಚಳ ಮಾಡಿರುವುದು ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದಲೇ ಹೊರತು ಜನರ ಮೇಲೆ ಕೋಪ ತೀರಿಸಿಕೊಳ್ಳಲು ಅಲ್ಲ. ಬಿಜೆಪಿಯವರು ನೀಡುತ್ತಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿಯೇ ಇಂಧನ ಬೆಲೆ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡ ಶಾಸಕರು, ಹಿಂದೆ ೬೦ ರು. ಇದ್ದ ಇಂಧನ ಬೆಲೆಯನ್ನು ೯೦ ರು.ಗೆ ಹೆಚ್ಚಿಸಿದ್ದು, ೪೦೦ರು. ಇದ್ದ ಅಡುಗೆ ಅನಿಲವನ್ನು ೧೦೦೦ ರು.ಗೆ ಹೆಚ್ಚಿಸಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎನ್ನುವುದನ್ನು ಬಹುಶಃ ಬಿಜೆಪಿಯವರು ಮರೆತಂತೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಕಡಿಮೆ ಆಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದರು.