ಸೋಮವಾರಪೇಟೆ: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ

| Published : Jun 30 2025, 01:47 AM IST

ಸಾರಾಂಶ

ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆ ಅಧ್ಯಕ್ಷ ಜಿ.ಎಂ. ಕಾಂತರಾಜ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆ ಅಧ್ಯಕ್ಷ ಜಿ.ಎಂ. ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕೆಂದು ಕರೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಹಾಗೂ ಮಾರ್ಚ್ ಹಣ ಸಂದಾಯವಾಗಿಲ್ಲ. ಏಪ್ರಿಲ್ ತಿಂಗಳ ಹಣ ಖಾತೆಗೆ ಜಮೆಯಾಗಿದ್ದು, ಮೇ ತಿಂಗಳ ಕಂತು ಕೆಲವರಿಗೆ ಮಾತ್ರ ಬಾಕಿಯಿದೆ. ಫೆಬ್ರವರಿ ಅಂತ್ಯಕ್ಕೆ 634 ಹೊಸ ಅರ್ಜಿಗಳು ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ತಿಳಿಸಿದರು.

ತಿಂಗಳ 20ನೇ ತಾರೀಕಿನೊಳಗೆ ಅಕ್ಕಿ ಸರಬರಾಜು ಮಾಡುವಂತೆ ಕ್ರಮ ವಹಿಸಲು ಕೆಡಿಪಿ ಸಭೆಯ ಗಮನ ಸೆಳೆಯಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಯುವ ನಿಧಿ ಯೋಜನೆಯಡಿ ಪ್ರತಿ ತಿಂಗಳು ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನೋಂದಾವಣೆ ಮಾಡಿಕೊಂಡಿರುವ ನಿರುದ್ಯೋಗಿಗಳ ಖಾತೆಗೆ ಹಣ ಜಮೆಯಾಗುತ್ತಿದೆ ಎಂದು ಅಧಿಕಾರಿ ಮಂಜುನಾಥ್ ಹೇಳಿದರು.

ಮೀಟರ್ ರೀಡಿಂಗ್‌ಗೆ ಬರುವ ಸಂದರ್ಭ ಮನೆ ಬಾಗಿಲು ಹಾಕಿದ್ದರೆ, ಮುಂದಿನ ತಿಂಗಳ ರೀಡಿಂಗ್‌ನಲ್ಲಿ ಎರಡೂ ತಿಂಗಳಿಗೆ ಸೇರಿಸಿ ಒಟ್ಟಿಗೆ ಬಿಲ್ ನೀಡುತ್ತಿರುವುದರಿಂದ ಹಲವಷ್ಟು ಮಂದಿ ಬೇರೆ ದಾರಿಯಿಲ್ಲದೇ ಹಣ ಪಾವತಿ ಮಾಡಬೇಕಿದೆ. ಇದಕ್ಕೆ ಅವಕಾಶ ಕಲ್ಪಿಸದೇ ಒಂದು ವೇಳೆ ಬಾಗಿಲು ಹಾಕಿದ್ದರೆ ಕಳೆದ ತಿಂಗಳ ಸರಾಸರಿ ಬಿಲ್ ಹಾಕಬೇಕು ಎಂದು ಸಭೆಯಲ್ಲಿದ್ದ ಸದಸ್ಯ ಎಸ್.ಎಂ. ಡಿಸಿಲ್ವಾ ಗಮನ ಸೆಳೆದರು.

ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದವರಿಗೆ ಇದೀಗ ಸರ್ವಿಸ್ ಶುಲ್ಕ ಎಂದು 500 ರಿಂದ 2 ಸಾವಿರಕ್ಕೆ ಬಿಲ್ ಬರುತ್ತಿದೆ ಎಂದು ಶನಿವಾರಸಂತೆಯ ಅಬ್ಬಾಸ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ಕಾಂತರಾಜ್ ಅವರು, ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಶಕ್ತಿ ಯೋಜನೆಯಡಿ ಕಳೆದ ಸಾಲಿನ ಸಭೆಯಲ್ಲಿ ಚರ್ಚೆಯಾದಂತೆ ಮಡಿಕೇರಿ-ಬೆಂಗಳೂರು ಬಸ್ ಹಂಡ್ಲಿಯಲ್ಲಿ ನಿಲುಗಡೆಗೆ ಕ್ರಮ ವಹಿಸಲಾಗಿದೆ, ಹರಗ-ಸೂರ್ಲಬ್ಬಿ-ಶಿರಂಗಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಪರಮೇಶ್ ಹೇಳಿದರು.

ಸೋಮವಾರಪೇಟೆಯಿಂದ ಮಡಿಕೇರಿಗೆ ಬೆಳಗ್ಗೆ ಶಾಲಾ ಕಾಲೇಜು ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯ ರಾಜು ಮನವಿ ಮಾಡಿದರು. ಭಾನುವಾರದಂದು ತಾಕೇರಿ ಮಾರ್ಗದಲ್ಲಿ ಸರ್ಕಾರಿ ಸಂಚಾರ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಸದಸ್ಯ ರಾಜಪ್ಪ ಹೇಳಿದರು. ದುಂಡಳ್ಳಿ, ಮಾದ್ರೆ, ಚಂಗಡಹಳ್ಳಿ ಮಾರ್ಗದಲ್ಲಿ ನೂತನ ಬಸ್ ಮಾರ್ಗ ಅಳವಡಿಸಬೇಕೆಂದು ಸದಸ್ಯ ಅಬ್ಬಾಸ್ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸಂಬಂಧಿಸಿದ ಇಲಾಖಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, 5 ಇಲಾಖೆಗಳ ಅಧಿಕಾರಿಗಳು, ಸಮಿತಿಯ ಸದಸ್ಯರು ಇದ್ದರು.