ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ

| Published : Jul 13 2025, 01:18 AM IST

ಸಾರಾಂಶ

ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದೇ ಬಡವರ ಕಲ್ಯಾಣಕ್ಕಾಗಿ ಅವುಗಳ ಪರಿಣಾಮಕಾರಿ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ

ಹಾವೇರಿ: ಸರ್ಕಾರದ ಮಹತ್ವಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಕಡು ಬಡವರು, ಕೂಲಿ ಕಾರ್ಮಿಕರು ಹಾಗೂ ದಿನದಲಿತರಿಗೆ ವರದಾನವಾಗಿದೆ. ಇಂತಹ ಯೋಜನೆಗಳನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಹಿರೇಮಠ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದೇ ಬಡವರ ಕಲ್ಯಾಣಕ್ಕಾಗಿ ಅವುಗಳ ಪರಿಣಾಮಕಾರಿ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲೆಯಲ್ಲಿ ಜೂನ್‌ನಲ್ಲಿ ಶಕ್ತಿ ಯೋಜನೆಯಡಿ 55 ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆ ಆರಂಭವಾದಾಗಿನಿಂದ ಈವರೆಗೆ 12.67 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಕಳೆದ ಸಭೆಯಲ್ಲಿ ಎಲ್ಲ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಈಗಾಗಲೇ ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವ್ಯವಸ್ಥೆ ಎಲ್ಲ ತಾಲೂಕು ಬಸ್ ನಿಲ್ದಾಣಗಳಲ್ಲೂ ಜಾರಿಯಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ಜ್ಯೋತಿ ಯೋಜನೆ:

ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಹರಿರುವ ಸ್ಥಾವರಗಳು 407983, ಜೂನ್ 2025ರ ಅಂತ್ಯಕ್ಕೆ 400769 ಸ್ಥಾವರಗಳು ಗೃಹ ಬಳಕೆಗೆ ನೋಂದಣಿಯಾಗಿವೆ. ಕಳೆದ ಸಭೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದ ವಿದ್ಯುತ್ ಕಂಬಗಳ ಬೀಳುವ ಹಂತಕ್ಕೆ ಬಂದಿವೆ ಅವುಗಳನ್ನು ಬದಲಾವಣೆಗೆ ಮಾಡುವಂತೆ ಸೂಚಿಸಿತ್ತು. ಆದರೂ ಕೆಲವು ಕಡೆ ಬಾಗಿರುವ ವಿದ್ಯುತ್ ಕಂಬಗಳನ್ನು ತೆರವು ಮಾಡದೇ ಹಾಗೆ ಬಿಟ್ಟಿದೀರಿ ಇದರಿಂದ ಹೊಲಗದ್ದೆಗಳಲ್ಲಿ ನಿತ್ಯ ಕೆಲಸ ಮಾಡುವ ರೈತರಿಗೆ ಅಥವಾ ಜಾನುವಾರುಗಳಿಗೆ ಅನಾಹುತವಾದರೆ ಅದಕ್ಕೆ ಯಾರು ಹೊಣೆ ಕೂಡಲೇ ಬಾಗಿರುವ ಕಂಬಗಳನ್ನು ಗುರುತಿಸಿ ಸರಿಪಡಿಸಿ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅನ್ನ ಭಾಗ್ಯ ಯೋಜನೆ:

ಜಿಲ್ಲೆಯಲ್ಲಿ ಡಿಸೆಂಬರ್ 2024ರ ಅಂತ್ಯಕ್ಕೆ ₹327.62 ಕೋಟಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖಾಂತರ ನಗದು ಜಮಾ ಮಾಡಲಾಗಿದೆ. ಕಳೆದ ಸಭೆಯಲ್ಲಿ ಕಾಳು ಸಂತೆಯಲ್ಲಿ ಅನ್ನ ಭಾಗ್ಯ ಅಕ್ಕಿಯು ಮಾರಾಟವಾಗುತ್ತಿರುವುದನ್ನು ತಡೆಗಟ್ಟಲು ಏನು ಕ್ರಮ ತೆಗೆದುಕೊಂಡಿದೀರಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರು ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಉಪ ನಿರ್ದೇಶಕರು ಕಾಳು ಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರನ್ನು ಗುರುತಿಸಲಾಗಿದೆ. ಈಗಾಗಲೇ 8 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಹಾಗೆಯೇ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೂ ಕ್ರಮ ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗೃಹ ಲಕ್ಷ್ಮೀ ಯೋಜನೆ:

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮೇ 2025ರ ಅಂತ್ಯಕ್ಕೆ 395286 ಫಲಾನುಭವಿಗಳಿಗೆ ₹79.05 ಕೋಟಿ ಮೊತ್ತವನ್ನು ಸಂದಾಯ ಮಾಡಲಾಗಿದೆ. ಜೂನ್ 2025ರ ತಿಂಗಳಿನ ಹಣ ಸರ್ಕಾರದಿಂದ ಅನುದಾನ ಬಿಡುಗಡೆ ಆದ ಮೇಲೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.

ಯುವ ನಿಧಿ ಯೋಜನೆ:

ಜಿಲ್ಲೆಯ ಉದ್ಯೋಗಾಕಾಂಕ್ಷಿಗಳನ್ನು ಗುರುತಿಸಿ ಅವರಿಗೆ ಕಾರ್ಯಾಗಾರ ಏರ್ಪಡಿಸಿ ಎಲ್ಲಲ್ಲಿ ಉದ್ಯೋಗ ಅವಕಾಶಗಳಿವೆ ಮತ್ತು ಆ ಉದ್ಯೋಗಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುವುದನ್ನು ತಿಳಿಸಬೇಕು ಇದು ಎಲ್ಲ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ ಉಪಯೋಗವಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಡಾ. ಪುನೀತ ಬಿ.ಆರ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಮೈದೂರ, ತಾಲೂಕಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.