ಸಂಡೂರು: ಬಡ ಜನತೆ ಸ್ವಾಭಿಮಾನದಿಂದ,, ಸಮೃದ್ಧಿಯ ಬದುಕು ಬದುಕಲಿ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕಿ ಅನ್ನಪೂರ್ಣಾ ಈ. ತುಕಾರಾಂ ಹೇಳಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ಸಮಿತಿಯ ಕಚೇರಿ ಹಾಗೂ ಶಾಸಕರ ಜನ ಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಬದಲಾಗಿದೆ. ಅದರಲ್ಲೂ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ತುಂಬಲು, ಬ್ಯಾಂಕಿಂಗ್ ವ್ಯವಹಾರಗಳನ್ನು ತಿಳಿದುಕೊಳ್ಳುವಂತೆ ಮಾಡಲು, ನಿರುದ್ಯೋಗಿ ಯುವಕರಲ್ಲಿ ಭರವಸೆಗಳನ್ನು ಮೂಡಿಸಲು, ಬಡ ಜನತೆಯನ್ನು ಹಸಿವಿನಿಂದ ನರಳದಂತೆ ಮಾಡಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಯೋಜನೆಗಳ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಂಬಂದಗಳನ್ನು ಬೆಸೆಯುವ ಕೆಲಸ ಮಾಡಿವೆ. ಜಿಲ್ಲೆಯಲ್ಲಿ 2.98 ಲಕ್ಷ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆ ತಲುಪಿದೆ. ತಾಲೂಕಿನಲ್ಲಿ 50767 ಕುಟುಂಬಗಳಿಗೆ ಯೋಜನೆ ತಲುಪುತ್ತಿದೆ. ಈಗಾಗಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲೂಕಿನಲ್ಲಿ 107 ಜನರದ್ದು ಮಾತ್ರ ಬ್ಯಾಂಕ್ ಅಕೌಂಟ್ ಅಪ್‌ಡೇಟ್ ಮಾಡಬೇಕಿದೆ. 14 ಜನರ ಇಕೆವೈಸಿ ಪೆಂಡಿಂಗ್ ಇದೆ ಎಂದರು.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಉಪಾಧ್ಯಕ್ಷ ಹೆಚ್. ಲಕ್ಷ್ಮಣ, ವಾಡಾ ಅಧ್ಯಕ್ಷ ಅಕ್ಷಯ್ ಎ. ಲಾಡ್ ಮಾತನಾಡಿದರು. ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕಾಧಿಕಾರಿ ಮಡಗಿನ ಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಾಸಕರು ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಸರ್ಕಾರದ ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿತರಿಸಿದರು.


ಪದಗ್ರಹಣ ಮಾಡಿದ ಪದಾಧಿಕಾರಿಗಳುನೂರುದ್ದೀನ್ ಎಸ್ (ಅಧ್ಯಕ್ಷ), ಎಂ. ಶ್ರೀಧರ್, ನಾಗರಾಜ್, ರುದ್ರಗೌಡ, ಜ್ಯೋತಿ, ಪದ್ಮಾ, ಜಿ. ಅಜಯ್‌ಕುಮಾರ್, ಮಂಜುನಾಥ್, ಟಿ.ಎಂ. ಮಹೇಶ್, ಗಣೇಶ್‌ಕುಮಾರ್ ಎಚ್. ಟಿ., ಹೊಸಗೇರಪ್ಪ ಎಂ., ಚಿದಾನಂದಪ್ಪ ಎಂ., ಮಹೇಶ್ವರಸ್ವಾಮಿ, ಜಿ.ಜೆ. ಶಿವಕುಮಾರ್, ಜಿಲಾನ್ (ಸದಸ್ಯರು), ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ ಸ್ವಾಗತಿಸಿದರು. ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ನಿರೂಪಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ವಿನಯ್‌ಕುಮಾರ್ ಗೌಡ, ಮುಖಂಡರಾದ ಚಿತ್ರಿಕಿ ಸತೀಶ್, ಎಸ್. ಸಿರಾಜ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.