ಗ್ಯಾರಂಟಿಗೆ ೨ ವರ್ಷದಲ್ಲಿ ₹೨೫ ಸಾವಿರ ಕೋಟಿ ಎಸ್ಸಿ, ಎಸ್ಟಿ ಹಣ ಬಳಕೆ: ಬಸವರಾಜ ಬೊಮ್ಮಾಯಿ ಹೇಳಿಕೆ

| Published : Sep 10 2024, 01:35 AM IST

ಗ್ಯಾರಂಟಿಗೆ ೨ ವರ್ಷದಲ್ಲಿ ₹೨೫ ಸಾವಿರ ಕೋಟಿ ಎಸ್ಸಿ, ಎಸ್ಟಿ ಹಣ ಬಳಕೆ: ಬಸವರಾಜ ಬೊಮ್ಮಾಯಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ರಸ್ತೆ ಅಭಿವೃದ್ಧಿಪಡಿಸುವುದು ಹೋಗಲಿ ಗುಂಡಿಗಳಿಗೆ ಹಿಡಿ ಮಣ್ಣು ಹಾಕುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ವ್ಯಾಪ್ತಿಗಳಲ್ಲಿ ಬೀದಿದೀಪ ಕೂಡ ಅಳವಡಿಸಿಲ್ಲ. ಇಂಥ ಸ್ಥಿತಿ ರಾಜ್ಯದಲ್ಲಿ ಎಂದಿಗೂ ಬಂದಿರಲಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶಿರಹಟ್ಟಿ: ರಾಜ್ಯ ಕಾಂಗ್ರೆಸ್ ಎರಡು ವರ್ಷ ಪೂರೈಸುವಷ್ಟರಲ್ಲಿ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ₹೨೫ ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ತುಳಿತಕ್ಕೊಳಗಾದ ಜನರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಬಿಜೆಪಿ ಶಿರಹಟ್ಟಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ದಿನಕ್ಕೊಂದು ಹಗರಣಗಳು ಬಯಲಿಗೆ ಬರುತ್ತಿವೆ. ವಾಲ್ಮೀಕಿ ನಿಗಮದಲ್ಲಿ ₹೧೮೯ ಕೋಟಿ ಅವ್ಯವಹಾರ ನಡೆದಿದೆ. ಸ್ವತ ಸಿಎಂ ಸಿದ್ದರಾಮಯ್ಯ ಅವರೇ ₹೮೯ ಕೋಟಿ ಎಂದು ಒಪ್ಪಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ರಸ್ತೆ ಅಭಿವೃದ್ಧಿಪಡಿಸುವುದು ಹೋಗಲಿ ಗುಂಡಿಗಳಿಗೆ ಹಿಡಿ ಮಣ್ಣು ಹಾಕುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ವ್ಯಾಪ್ತಿಗಳಲ್ಲಿ ಬೀದಿದೀಪ ಕೂಡ ಅಳವಡಿಸಿಲ್ಲ. ಇಂಥ ಸ್ಥಿತಿ ರಾಜ್ಯದಲ್ಲಿ ಎಂದಿಗೂ ಬಂದಿರಲಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಅಭಿವೃದ್ಧಿಗೆಂದು ₹೧.೫ ಲಕ್ಷ ಕೋಟಿ ಸಾಲ ಪಡೆದಿದ್ದು, ಯಾವುದೇ ಅಭಿವೃದ್ಧಿಯೂ ಇಲ್ಲ. ಎಲ್ಲ ರಂಗಗಳಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರಿಗೆ ಭ್ರಮನಿರಸನವಾಗಿದೆ,.ಕಾಂಗ್ರೆಸ್ ಅಧಿಕಾರಕ್ಕೆ ತಂದು ಬೇಸತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿಲ್ಲ. ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ದೊರೆತಿಲ್ಲ ಎಂದರು.

ಸಿದ್ರಾಮಣ್ಣನನ್ನು ನೋಡಿ ಕನಿಕರವಾಗುತ್ತಿದೆ:

ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದವರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಬ್ಬರದ್ದೇ ಕಾಟ ಇತ್ತು. ಆದರೆ, ಸಿದ್ದರಾಮಯ್ಯ ಅವರು ನಂಬಿದವರೇ ನಿತ್ಯ ಸಿಎಂ ನಾನೇ ಆಗುತ್ತೇನೆ ಎಂದು ಒಳಗೊಳಗೆ ಕಾಟಕೊಡುತ್ತಿದ್ದಾರೆ. ಸಚಿವ ಸಂಪುಟದ ಮೇಲೆ ವಿಶ್ವಾಸ ಇಲ್ಲದಂತಾಗಿದ್ದು, ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಎದುರಾಗಿರುವುದನ್ನು ನೋಡಿದರೆ ಕನಿಕರವಾಗುತ್ತದೆ ಎಂದರು.

ಮಧ್ಯಂತರ ಚುನಾವಣೆ ಗ್ಯಾರಂಟಿ

ಸದ್ಯದ ರಾಜಕೀಯ ಬೆಳವಣಿಗೆ ಗಮನಿಸಿದರೆ ಯಾವುದೇ ಹಂತದಲ್ಲಾದರೂ ಮಧ್ಯಂತರ ಚುನಾವಣೆ ಘೋಷಣೆಯಾಗುತ್ತದೆ. ಸರ್ಕಾರ ಭ್ರಷ್ಟಾಚಾರ, ಅವ್ಯವಹಾರದಲ್ಲಿ ಮುಳುಗಿ ಹೋಗಿದ್ದು, ಸರಳ ರೀತಿಯಲ್ಲಿ ಅಧಿಕಾರ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಕಾರ್ಯಕರ್ತರಿಂದ ನಿರ್ಮಿತವಾದ ಪಕ್ಷ

ಬಿಜೆಪಿ ಕಾರ್ಯಕರ್ತರಿಂದ ನಿರ್ಮಿತವಾದ ಪಕ್ಷವಾಗಿದೆ. ಹಿಂದಿನ ಬಾರಿ ಸದಸ್ಯತ್ವ ಅಭಿಯಾನ ಮಾಡಿದಾಗ ಇಡಿ ರಾಷ್ಟ್ರದಲ್ಲಿ ೭ ಕೋಟಿ ಜನರನ್ನ ಸದಸ್ಯರನ್ನಾಗಿ ಮಾಡಿದ್ದು, ರಾಜ್ಯದಲ್ಲಿ ೬೫ ಲಕ್ಷಕ್ಕಿಂತ ಹೆಚ್ಚು ಜನರನ್ನು ನೋಂದಣಿ ಮಾಡಲಾಗಿತ್ತು ಎಂದರು.

ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ೩೦ ದಿನಗಳಲ್ಲಿ ೭೦ ಸಾವಿರ ಸದಸ್ಯರ ನೋಂದಣಿ ಆಗಬೇಕು. ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ೨೫೦ ಬೂತ್‌ಗಳು ಬರುತ್ತಿದ್ದು, ಎಲ್ಲ ವರ್ಗ, ಎಲ್ಲ ಸಮಾಜ ಹಾಗೂ ಎಲ್ಲ ಸ್ತರದ ಜನರ ಸದಸ್ಯತ್ವ ಆಗಬೇಕು. ಅಂದಾಗ ಮಾತ್ರ ಎಲ್ಲರನ್ನು ಒಳಗೊಂಡಂತೆ ಆಡಳಿತ ನೀಡಲು ಸಾಧ್ಯ. ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಯೋಜನೆ ದೊರೆಯಲು ಸಾಧ್ಯ ಎಂದು ಹೇಳಿದರು.

ಶಾಸಕ ಚಂದ್ರು ಲಮಾಣಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ತಾಲೂಕು ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ್, ಮಂಡಲದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಎಂ.ಎಸ್. ಕರಿಗೌಡರ, ಫಕ್ಕಿರೇಶ ರಟ್ಟಿಹಳ್ಳಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಬಿ.ಡಿ. ಪಲ್ಲೇದ, ಚಂದ್ರಕಾಂತ ನೂರಶೆಟ್ಟರ, ಗೂಳಪ್ಪ ಕರಿಗಾರ, ಪ್ರವೀಣ ಪಾಟೀಲ, ಅಕಬರ ಯಾದಗಿರಿ, ರಾಮಣ್ಣ ಕಂಬಳಿ, ಯಲ್ಲಪ್ಪ ಇಂಗಳಗಿ, ನಾಗರಾಜ ಕುಲಕರ್ಣಿ ಸೇರಿ ಅನೇಕರು ಇದ್ದರು.