ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಡವರ ಆಸರೆಯ ಬೆಳಕು : ಶಾಸಕ ಬೇಳೂರು ಗೋಪಾಲಕೃಷ್ಣ

| Published : Sep 14 2024, 01:55 AM IST / Updated: Sep 14 2024, 12:01 PM IST

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಸಾಕಷ್ಟು ಕುಟುಂಬಗಳು ಭರವಸೆಯಲ್ಲಿ ಬದುಕು ಕಟ್ಟಿಕೊಂಡಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

 ಸಾಗರ :  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಸಾಕಷ್ಟು ಕುಟುಂಬಗಳು ಭರವಸೆಯಲ್ಲಿ ಬದುಕು ಕಟ್ಟಿಕೊಂಡಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆ ಬಡವರ ಪಾಲಿಗೆ ಆಸರೆಯ ಬೆಳಕು ಎಂದರು.

ಪ್ರತಿ ವರ್ಷ ರಾಜ್ಯದಲ್ಲಿ ಐದು ಗ್ಯಾರಂಟಿಗಾಗಿ ೫೪ ಸಾವಿರ ಕೋಟಿ ರು. ವಿನಿಯೋಗ ಮಾಡಲಾಗುತ್ತಿದೆ. ಈ ಮೊತ್ತ ಗೋವಾ ರಾಜ್ಯದ ಬಜೆಟ್ನಷ್ಟು ದೊಡ್ಡದು ಎಂದರೂ ಅಚ್ಚರಿಯಿಲ್ಲ. ರಾಜ್ಯದ ಆರು ಕೋಟಿ ಜನರಿಗೆ ಒಂದಿಲ್ಲೊಂದು ಹಂತದಲ್ಲಿ ಮನೆಗೊಬ್ಬರಿಗಾದರೂ ಯೋಜನೆ ತಲುಪುತ್ತಿದೆ. ಅನೇಕ ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯಿಂದ ಹೊಸ ಬದುಕು ಸಿಕ್ಕಿದೆ ಎಂದು ಹೇಳಿದರು.

ಬಿಜೆಪಿ ಗ್ಯಾರಂಟಿಯನ್ನು ಬೋಗಸ್ ಎಂದು ಹೇಳುತ್ತಿರುವುದು ಕೀಳು ಮನಸ್ಥಿತಿಗೆ ಸಾಕ್ಷಿಯಾಗಿದೆ. ಮಧ್ಯವರ್ತಿ ಇಲ್ಲದೇ ನೇರ ವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತಿದೆ. ಇಂತಹ ಯೋಜನೆ ಬಗ್ಗೆ ಅಪಸ್ವರ ನುಡಿಯುತ್ತಿರುವ ಬಿಜೆಪಿ ಬಡಜನರ ವಿರೋಧಿಯಾಗಿದೆ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ರಾಜ್ಯದಲ್ಲಿ ಸಂಪನ್ಮೂಲ ಮತ್ತು ಸಂಪತ್ತನ್ನು ಬಡಜನರಿಗೆ ಹಂಚುವ ವಿಶೇಷ ಯೋಜನೆಯೆ ಗ್ಯಾರಂಟಿ ಅನುಷ್ಠಾನವಾಗಿದೆ. ಬಡವರ ಕೈಯಲ್ಲಿ ಹಣ ಚಲಾವಣೆ ಯಾಗುತ್ತಿರುವ ವಿಶೇಷ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಜನರ ಪೂರ್ಣ ಮೆಚ್ಚಿಗೆ ಗಳಿಸಿದೆ. ನೂತನ ಕಚೇರಿ ಮೂಲಕ ಸೌಲಭ್ಯ ಸಿಗದವರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಕಲಸೆ ಚಂದ್ರಪ್ಪ, ಗುರುಕೃಷ್ಣ ಶೆಣೈ, ಚಂದ್ರಶೇಖರ್, ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.