ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುವುದಿಲ್ಲ: ಮಂಜುನಾಥ ಭಂಡಾರಿ

| Published : Mar 10 2024, 01:46 AM IST

ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುವುದಿಲ್ಲ: ಮಂಜುನಾಥ ಭಂಡಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ನೀಡುವ ಹಣದಿಂದ ರಾಜ್ಯ ದಿವಾಳಿಯಾಗುವುದಿಲ್ಲ. ಆದರೆ ಶ್ರೀಮಂತರ ಸಾಲ ಮನ್ನಾ ಮಾಡುವುದರಿಂದ ದೇಶ ದಿವಾಳಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಅವರು ಶನಿವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದು ರಾಜ್ಯದ ಶೇ.99 ಕುಟುಂಬಗಳು ಯಾವುದಾದರೊಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಬಡ ಕುಟುಂಬಗಳಿಗೆ ಸೇರುವ ಈ ಯೋಜನೆಗಳು ಅವರ ಆರ್ಥಿಕತೆಗೆ ಶಕ್ತಿಯಾಗುವ ಜತೆಗೆ ಒಂದಲ್ಲ ಒಂದು ರೀತಿಯಲ್ಲಿ ಖರ್ಚಾಗಿ ತೆರಿಗೆ ರೂಪದಲ್ಲಿ ಬಂದು ಸೇರುತ್ತಿದೆ. ಕರ್ನಾಟಕ ದಿವಾಳಿಯಾಗಿದ್ದರೆ, ಕೇಂದ್ರಕ್ಕೆ ಪ್ರತಿ ತಿಂಗಳು 12 ರಿಂದ 15 ಸಾವಿರ ಕೋಟಿ ತೆರಿಗೆ ಕಟ್ಟಲು ಸಾಧ್ಯವಿರಲಿಲ್ಲ ಎಂಬ ಸತ್ಯವನ್ನು ರಾಜ್ಯ ದಿವಾಳಿಯಾಗುತ್ತದೆ ಎಂಬ ಆರೋಪ ಮಾಡುತ್ತಿರುವವರು ಅರ್ಥೈಸಿಕೊಳ್ಳಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸಮಾವೇಶ ಉದ್ಘಾಟಿಸಿ, ಸರ್ಕಾರ ಕಾಂಗ್ರೆಸ್ ಪಕ್ಷದ್ದಾದರೂ ರಾಜ್ಯದ ಎಲ್ಲರ ಮನೆಗೂ ಗ್ಯಾರಂಟಿ ಯೋಜನೆಗಳು ತಲುಪಿವೆ. ರಾಹುಲ್ ಗಾಂಧಿ ಭಾರತ ಜೋಡೋ ಪಾದಯಾತ್ರೆ ಸಂದರ್ಭ ಆಲಿಸಿದ ಸಮಸ್ಯೆಗಳ ಫಲವಾಗಿ ಪಂಚ ಗ್ಯಾರಂಟಿಗಳ ಚಿಂತನೆ ಬರಲು ಸಾಧ್ಯವಾಗಿದೆ ಎಂದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಡಾ. ಆನಂದ ಕೆ. ಹಾಗೂ ಇತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೆಸ್ ಗೃಹಲಕ್ಷ್ಮೀ ಯೋಜನೆ, ಮೆಸ್ಕಾಂ ಇಲಾಖಾ ಅಧೀಕ್ಷಕ ಕೃಷ್ಣರಾಜ ಗೃಹಜ್ಯೋತಿ ಯೋಜನೆ, ತಾಲೂಕು ಆಹಾರ ನಿರೀಕ್ಷಕ ವಿಶ್ವ ಕೆ. ಅನ್ನಭಾಗ್ಯ ಯೋಜನೆ, ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಯುವನಿಧಿ ಯೋಜನೆಯ ಕುರಿತು ವರದಿ ನೀಡಿದರು.ಗ್ಯಾರಂಟಿ ಯೋಜನೆಯ ಫಲಾನುಭವಿಗಳಾದ ಶಾರದಾ, ಯಶಸ್, ಮಹಮ್ಮದ್ ನಿಜಾಮುದ್ದೀನ್, ದೇವಕಿ, ವಂದನಾ ಭಂಡಾರಿ ಅನಿಸಿಕೆ ವ್ಯಕ್ತಪಡಿಸಿದರು.ತಹಸೀಲ್ದಾರ್ ಪೃಥ್ವಿ ಸಾನಿಕಂ ಸ್ವಾಗತಿಸಿದರು. ಬೆಳ್ತಂಗಡಿ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಪ್ರಸ್ತಾವಿಸಿ, ವಂದಿಸಿದರು.