ಸಾರಾಂಶ
ನಾಡಿನ ಪ್ರಸಿದ್ಧ ಶಿರಸಿ ಶ್ರೀಮಾರಿಕಾಂಬಾ ದೇವಿಯ ಜಾತ್ರೆಯ ಪೂರ್ವದ ಸಾಂಪ್ರದಾಯಿಕ ವಿಧಿ-ವಿಧಾನಗಳಲ್ಲಿ ಪ್ರಮುಖವಾದ ಹೊರಬೀಡಿನ ಆಚರಣೆಗಳಲ್ಲಿ ಶುಕ್ರವಾರ ರಾತ್ರಿ ನಾಲ್ಕನೇಯ ಹೊರಬೀಡಿನ ಆಚರಣೆಯನ್ನು ಉತ್ತರ ದಿಕ್ಕಿನ ಗಾಳಿಮಾಸ್ತಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು.
ಶಿರಸಿ:
ನಾಡಿನ ಪ್ರಸಿದ್ಧ ಶಿರಸಿ ಶ್ರೀಮಾರಿಕಾಂಬಾ ದೇವಿಯ ಜಾತ್ರೆಯ ಪೂರ್ವದ ಸಾಂಪ್ರದಾಯಿಕ ವಿಧಿ-ವಿಧಾನಗಳಲ್ಲಿ ಪ್ರಮುಖವಾದ ಹೊರಬೀಡಿನ ಆಚರಣೆಗಳಲ್ಲಿ ಶುಕ್ರವಾರ ರಾತ್ರಿ ನಾಲ್ಕನೇಯ ಹೊರಬೀಡಿನ ಆಚರಣೆಯನ್ನು ಉತ್ತರ ದಿಕ್ಕಿನ ಗಾಳಿಮಾಸ್ತಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು.ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆಯ ವಿಧಿ-ವಿಧಾನಗಳೂ ಸಹ ವಿಶಿಷ್ಠವಾಗಿಯೇ ಇವೆ. ಇಂತಹ ವಿಶಿಷ್ಠ ಆಚರಣೆಗಳಲ್ಲಿ ಜಾತ್ರೆಯ ಮೊದಲು ನಡೆಯುವ ೫ ಹೊರಬೀಡುಗಳು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಈಗಾಗಲೇ ೩ ಹೊರಬೀಡು ನೆರವೇರಿಸಲಾಗಿದ್ದು, ರಥದ ಮರಕ್ಕೆ ವೃಕ್ಷಪೂಜೆ ಸಂಪ್ರದಾಯವು ಶ್ರೀದೇವಿಯ ದೇವಸ್ಥಾನದ ಆಚರಣೆಯಂತೆ ಶುಕ್ರವಾರ ೪ ಹೊರಬೀಡಿನ ದಿನ ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ನಡೆಯಿತು. ಅಂದೇ ರಾತ್ರಿ ಉತ್ತರ ದಿಕ್ಕಿನ ನಾಲ್ಕನೇಯ ಹೊರಬೀಡು ಸಹ ನಡೆಯಿತು.ಶ್ರೀದೇವಿಯ ದೇವಾಲಯದ ಪರಂಪರೆಯಂತೆ ಬಾಬದಾರ ಕುಟುಂಬದವರು ಪಡಲಿಗೆಗಳು ಮರ್ಕಿದುರ್ಗಿ ದೇವಸ್ಥಾನ, ನಂತರ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಗಳಲ್ಲಿ ಪೂಜೆ ನೆರವೇರಿಸಿ, ಅಲ್ಲಿಂದ ಗಾಳಿಮಾಸ್ತಿ ದೇವಸ್ಥಾನಕ್ಕೆ ಆಗಮಿಸಿ ವಿವಿಧ ವಿಧಿ-ವಿಧಾನ, ಆಚರಣೆಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದರು. ಸಾತ್ವಿಕವಾಗಿ ಬಲಿ ರೂಪದಲ್ಲಿ ಎರಡು ಕುಂಬಳಕಾಯಿ ಅರ್ಪಿಸಲಾಯಿತು.ಧರ್ಮದರ್ಶಿ ಮಂಡಳದ ಸದಸ್ಯರು, ಬಾಬದಾರರ ಕುಟುಂಬಸ್ಥರು, ಪಾರುಪತ್ಯಗಾರರು, ನೌಕರರು ಹಾಗೂ ಇತರರು ಉಪಸ್ಥಿತರಿದ್ದರು. ಸೇರಿದ್ದ ಎಲ್ಲರಿಗೂ ರಾತ್ರಿ ಮೊದಲನೇಯದಾಗಿ ಅವಲಕ್ಕಿ ಚಹಾ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ನಂತರ ನಾಲ್ಕನೇಯ ಹೊರಬೀಡಿನಲ್ಲಿಯ ವಿಶೇಷ ಬೆಳಗಿನ ಜಾವದ ಹೊತ್ತಿಗೆ ಭೋಜನ ಪ್ರಸಾದವನ್ನು ಹೊರಬೀಡಿನ ವಿಧಿ-ವಿಧಾನ ನೆರವೇರಿಸಲು ಬಂದ ಎಲ್ಲರೂ ಸ್ವೀಕರಿಸಿದರು.