ಸಾರಾಂಶ
ವಿಜಯಪುರ: ಮಹಾ ಶಿವರಾತ್ರಿ ಹಿನ್ನೆಲೆ ನಗರದ ಹೊರವಲಯದ ಶಿವಗಿರಿಯ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತಸಾಗರವೇ ಹರಿದುಬಂದಿತ್ತು. ಭಕ್ತಾದಿಗಳು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ, ಜಪ-ತಪ ಕೈಗೊಂಡಿದ್ದರು. ನಗರದ ಉಕ್ಕಲಿ ರಸ್ತೆಯಲ್ಲಿರುವ ಶಿವಗಿರಿಯಲ್ಲಿ ಚಲನಚಿತ್ರ ನಿರ್ಮಾಪಕ ಬಸಂತ ಕುಮಾರ ಪಾಟೀಲ, 85 ಅಡಿ ಉದ್ದದ ಶಿವನ ಮೂರ್ತಿಯ ದರ್ಶನ ಪಡೆದು ಪುನೀತರಾದರು. ಅಲ್ಲದೇ,ವಿಜಯಪುರದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಶಿವಗಿರಿ ಶಿವನ ದರ್ಶನ ಪಡೆದರು. ಇಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದಿದ್ದು, ವಿಶ್ವವಿಖ್ಯಾತ ಗೋಳಗುಮ್ಮಟ ವೀಕ್ಷಿಸಲು ಬರುವ ಪ್ರವಾಸಿಗರು ಶಿವಗಿರಿಗೂ ಆಗಮಿಸಿ ದರ್ಶನ ಪಡೆಯುತ್ತಿದ್ದಿದ್ದು ವಿಶೇಷವಾಗಿತ್ತು.
ನಗರದೆಲ್ಲೆಡೆ ಶಿವರಾತ್ರಿ ಭಕ್ತಿ ಸಂಭ್ರಮ ಮನೆ ಮಾಡಿತ್ತು. ಶಿವಭಕ್ತರು ಶಿವನ ನಾಮಸ್ಮರಣೆ ಮಾಡಿದರೆ, ಇನ್ನೂ ಕೆಲವು ಭಕ್ತರು ಓಂ ನಮಃ ಶಿವಾಯ ಮಂತ್ರ ಪಠಿಸುತ್ತಿದ್ದರು. ಶಿವಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕೂಡ ಒದಗಿಸಲಾಗಿತ್ತು. ಬೆಳಗ್ಗೆಯಿಂದಲೇ ವಾಹನಗಳಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದರು.ಶಿಖಾರಖಾನೆ ಬಡಾವಣೆಯಲ್ಲಿ ಶ್ರೀಚಕ್ರ ಹೊಂದಿರುವ ಶಿವಲಿಂಗದ ಸುಂದರೇಶ್ವರ ದೇವಾಲಯದಲ್ಲಿ ಭಕ್ತರ ದೊಡ್ಡ ಸಂಖ್ಯೆ ಕಂಡು ಬಂತು. ಅಪರೂಪದ ಶಿವಲಿಂಗ ಹೊಂದಿರುವ ಈ ದೇವಾಲಯಕ್ಕೆ ಭಕ್ತಾದಿಗಳು ಬಿರು ಬಿಸಿಲಿನಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕಂಡು ಬಂದಿತು.