ಸಾರಾಂಶ
ಕನಕಗಿರಿ: ಇತ್ತೀಚೆಗೆ ನಡೆದ ಕನಕಗಿರಿಯಲ್ಲಿ ನಡೆದದ್ದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶವೇ ಹೊರತು ಕನಕಗಿರಿ ಉತ್ಸವ ಅಲ್ಲ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ದೂರಿದರು.ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕಗಿರಿ ಉತ್ಸವದ ಹೆಸರಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ನಡೆದಿದೆ. ಸರ್ಕಾರದ ಕೋಟ್ಯಂತರ ರುಪಾಯಿ ಅನುದಾನ ಜನ ಕಲ್ಯಾಣಕ್ಕಾಗಿ ಆಗದೇ ದುಂದುವೆಚ್ಚ ಆಗಿದೆ ಎಂದು ಆರೋಪಿಸಿದರು.ಕನಕಗಿರಿ ಉತ್ಸವಕ್ಕೆ ನನ್ನ ಅವಧಿಯಲ್ಲಿ ಎರಡು ಬಾರಿ ಅನುದಾನ ಮಂಜೂರಾಗಿತ್ತು. ಆದರೆ ಕೊರೊನಾ ಮತ್ತು ಲೋಕಸಭಾ ಚುನಾವಣೆಯಿಂದಾಗಿ ಉತ್ಸವ ಆಚರಣೆ ಮಾಡಲಾಗಲಿಲ್ಲ. ಶಿವರಾಜ ತಂಗಡಗಿ ಉತ್ಸವದ ಹೆಸರಿನಲ್ಲಿ ಮತ್ತು ದೇವರ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿರುವುದು ಖಂಡನೀಯ ಎಂದರು.ಕ್ಷೇತ್ರದ ಜನ ಕೆಲಸ ಅರಸಿ ೨೫ ಸಾವಿರಕ್ಕೂ ಹೆಚ್ಚು ಗುಳೆ ಹೋಗಿದ್ದಾರೆ. ಎಷ್ಟೋ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ. ಹಳ್ಳಿ ಜನರು ಹೊಲ, ಗದ್ದೆಗಳಿಗೆ ನೀರು ತರುತ್ತಿದ್ದಾರೆ. ಜನರು ಗ್ಯಾರಂಟಿಗಳಿಗೆ ಮಾರು ಹೋಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದರಿಂದ ಇವತ್ತು ಮೂಲಸೌಕರ್ಯಗಳಿಗೂ ಅನುದಾನ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಅಂಜನಾದ್ರಿ, ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನುದಾನ ಘೋಷಿಸಿತ್ತು. ಇದೇ ಅನುದಾನವನ್ನು ನಾವು ಕೊಟ್ಟಿದ್ದೇವೆ ಎಂದು ಸಚಿವ ತಂಗಡಗಿ ಪುಕ್ಕಟ್ಟೆ ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ ಎಂದರು.ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ಅವ್ಯಾಹತವಾಗಿ ನಡೆದಿವೆ. ಈ ಹಿಂದೆ ಸಚಿವ ತಂಗಡಗಿ ಶ್ರೀದೇವಿ, ಭೂದೇವಿಯೆಂದು ಅಂತೆಲ್ಲ ಹೇಳುತ್ತಿದ್ದವರು ಇಂದು ಅವರ ಬೆಂಬಲಿಗರೇ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. ಇದು ಪೊಲೀಸ್ ಇಲಾಖೆಯ ಗಮನಕ್ಕಿದ್ದು, ಸುಮ್ಮನೆ ಕುಳಿತಿದ್ದಾರೆ. ಈ ಬಗ್ಗೆ ಹೋರಾಟ ಮಾಡುವೆ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಗುಡುಗಿದರು.ಸಂಗಣ್ಣರಿಗೆ ಬಿಜೆಪಿ ಟಿಕೆಟ್:ಬಿಜೆಪಿ ದೇಶಭಕ್ತರ ಪಕ್ಷ. ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಕೊಪ್ಪಳಕ್ಕೆ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಸಿಗಲಿದೆ. ಸಂಗಣ್ಣ ಹ್ಯಾಟ್ರಿಕ್ ಸಂಸದರಾಗಿ ಇತಿಹಾಸ ಸೃಷ್ಟಿಸುವುದು ನಿಶ್ಚಿತ ಎಂದರು.ಮಾಜಿ ಕಾಡಾ ಅಧ್ಯಕ್ಷ ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ, ಸಂಘಟನಾ ಕಾರ್ಯದರ್ಶಿ ಮಂಜುಳಾ ಕರಡಿ, ಮಂಡಲ ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್ ಇತರರಿದ್ದರು.