ಸಾರಾಂಶ
ಇಂಡಿ: ತಾಲೂಕಿನ ಅಂಜುಟಗಿ ಗ್ರಾಮದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಭೇಟಿ ನೀಡಿ ವಸತಿ ನಿಲಯ ಹಾಗೂ ಕೋಣೆಗಳ ಸ್ವಚ್ಚತೆ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಇಂಡಿ:
ತಾಲೂಕಿನ ಅಂಜುಟಗಿ ಗ್ರಾಮದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಭೇಟಿ ನೀಡಿ ವಸತಿ ನಿಲಯ ಹಾಗೂ ಕೋಣೆಗಳ ಸ್ವಚ್ಚತೆ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.ಇಲ್ಲಿ ಊಟ ಹಾಗೂ ಉಪಹಾರ ಸರಿಯಾಗಿ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಸಮಸ್ಯೆ ಇದ್ದರೆ ನನಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾಗಿ ತಿಳಿಸಿದರು. ವಿಜ್ಞಾನ ಶಿಕ್ಷಕ ಸರಿಯಾಗಿ ಪಾಠ ಬೋಧನೆ ಮಾಡುವುದಿಲ್ಲ. ಅವರು ಪಾಠ ಬೋಧನೆ ಮಾಡಿದ್ದು ನಮಗೆ ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅದನ್ನು ಮುಂಬರುವ ಶೈಕ್ಷಣಿಕ ವರ್ಷ ಆರಂಭ ಆಗುವಷ್ಟರಲ್ಲಿ ವಿಜ್ಞಾನ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು. ವಿದ್ಯಾರ್ಥಿನಿಯರ ವಸತಿ ಶಾಲೆ ಇರುವುದರಿಂದ ಇಲ್ಲಿ ಡಿ ಗ್ರುಪ್ ನೌಕರರು ಹಾಗೂ ವಾರ್ಡನ್ ಸಹ ಮಹಿಳಾ ಸಿಬ್ಬಂದಿ ಇದ್ದರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಈ ಕುರಿತು ಕ್ರೈಸ್ ಮಂಡಳಿಗೆ ಪತ್ರ ಬರೆಯುವುದಾಗಿ ಹೇಳಿದರು.
ಪ್ರಾಚಾರ್ಯರು ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ನಿರ್ವಹಿಸಬೇಕು. ಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯೂ ಅನುತ್ತೀರ್ಣ ಆಗಬಾರದು. ಸರ್ಕಾರ ಮಕ್ಕಳ ಬೋಧನೆಗೆ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೋ ಆ ವಿಷಯದ ಶಿಕ್ಷಕ ಹಾಗೂ ಪ್ರಾಂಶುಪಾಲರೇ ನೇರ ಹೊಣೆಗಾರರು. ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ತಾಕೀತು ಮಾಡಿದರು. ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆಯಬೇಕು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಪಾಲಕರ ಮುಂದೆ ಇಡಬೇಕು. ಭದ್ರತೆ ಉತ್ತಮಗೊಳಿಸಬೇಕು ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.ಪ್ರಾಂಶುಪಾಲ ಚನ್ನಪ್ಪ ಶೇಠೆ, ವಾರ್ಡನ್ ಸಂಜೀವ ಹಿರೋಳ, ಗ್ರಾಪಂ ಅಧ್ಯಕ್ಷ ಬಸವರಾಜ ಕವಡಿ ಇದ್ದರು.