ಇಂದು ಕುರುವತ್ತಿ ಬಸವೇಶ್ವರ ರಥೋತ್ಸವ

| Published : Mar 10 2024, 01:45 AM IST

ಸಾರಾಂಶ

ಐತಿಹಾಸಿಕ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಮಾ. 10ರಂದು ಸಂಜೆ ಸಂಭ್ರಮದ ರಥೋತ್ಸವ ನಡೆಯಲಿದೆ. ಮಾ. 4ರಂದು ಜಾತ್ರೆಗೆ ಚಾಲನೆ ನೀಡಲಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಪಶ್ಚಿಮ ವಾಹಿನಿ, ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ತುಂಗಭದ್ರಾ ನದಿ ತೀರದ ಪವಿತ್ರ ಪುಣ್ಯಸ್ಥಳ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಮಾ. 4ರಂದು ಚಾಲನೆ ನೀಡಲಾಗಿದ್ದು. ಮಾ. 10ರಂದು ಸಂಜೆ ಸಂಭ್ರಮದ ರಥೋತ್ಸವ ಜರುಗಲಿದೆ.ಭೂಮಿ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ದೇವರಿಗೆ ಕಂಕಣಧಾರಣ ಸೇವೆ ಆನಂತರ ಉತ್ಸವ ಮೂರ್ತಿಯು ಪ್ರಭಾವಳಿಯಲ್ಲಿ ತುಂಗಭದ್ರಾ ನದಿಗೆ ತೆರಳಿ ಸುಕ್ಷೇತ್ರದ ಸಿ೦ಹಾಸನ ಕಟ್ಟೆಯವರೆಗೂ ಸಕಲ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಗಿದೆ. ಫೆ. 8ರಂದು ಮಹಾ ಶಿವರಾತ್ರಿಯಂದು ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಗಿತ್ತು. ಮಾ. 10ರಂದು ಮಹಾ ಶಿವರಾತ್ರಿ ಅಮಾವಾಸ್ಯೆ ದಿನ ಸಂಜೆ 4.30ಕ್ಕೆ ಸಂಭ್ರಮದ ರಥೋತ್ಸವ ನಡೆಯಲಿದೆ.

ಶತಮಾನಗಳ ಕಾಲ ಇತಿಹಾಸವಿರುವ ಕುರುವತ್ತಿ ಬಸವೇಶ್ವರ ಜಾತ್ರೆಯು ಗ್ರಾಮೀಣ ಸೊಗಡಿನ ಪರಂಪರೆ ಇನ್ನು ಜೀವಂತವಾಗಿದೆ. ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆಗೆ ಹುಬ್ಬಳ್ಳಿ, ದಾವಣಗೆರೆ, ಹರಿಹರ, ಗದಗ, ರಾಣಿಬೆನ್ನೂರು, ಧಾರವಾಡ, ಹಾವೇರಿ, ಹೂವಿನಹಡಗಲಿ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ವಿಜಯನಗರ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ.

ಮಾ. 11ರಂದು ಸಂಜೆ 5 ಗಂಟೆಗೆ ಓಕುಳಿ ಉತ್ಸವವು ಸಿಂಹಾಸನ ಕಟ್ಟೆಯ ಮುಂದೆ ನಡೆಯಲಿದೆ. ಮಾ. 12ರಂದು ಉದಯ ಉತ್ಸವ ಮೂರ್ತಿಯು ಸಿಂಹಾಸನ ಕಟ್ಟೆಯಿಂದ ದೇವಸ್ಥಾನಕ್ಕೆ ಆಗಮಿಸಿದ ಆನಂತರ ಮಹಾ ಮಂಗಳಾರತಿ ನಡೆಯಲಿದೆ.

ತುಂಗಭದ್ರೆಯ ತಟದಲ್ಲಿರುವ ಕುರುವತ್ತಿ ಪುಣ್ಯ ಕ್ಷೇತ್ರವಾಗಿದ್ದು, ಈ ಸುಕ್ಷೇತ್ರದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ಹಿನ್ನೆಲೆವುಳ್ಳ, ಪುರಾತನ ಕಾಲದ ದೇವಸ್ಥಾನಗಳಲ್ಲಿ 6 ಅಡಿ ಎತ್ತರದ ನಂದಿ ಮತ್ತು 4 ಅಡಿ ಎತ್ತರದ ಶಿವಲಿಂಗು ಇದೆ.

ಕುರುವತ್ತಿಗೆ ಪೌರಾಣಿಕ ಹಿನ್ನೆಲೆ ಪ್ರಕಾರ, ಇಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿಯ ಕುರುವತ್ತಿಯಲ್ಲಿ ಶಿವ ಮಲ್ಲಿಕಾರ್ಜುನ ಲಿಂಗ ರೂಪದಲ್ಲಿ ಅವತರಿಸಿ, ದಾನವರನ್ನು ಸಂಹರಿಸಿದ್ದಾನೆಂದು ಪ್ರತೀತಿ ಇದೆ. ಸು೦ದರ ಶಿಲ್ಪ ವೈಭವವನ್ನು ಹೊಂದಿರುವ ಈ ಪುರಾತನ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ವಂಶದ ದೊರೆ ಒಂದನೇ ಸೋಮೇಶ್ವರ (ಕ್ರಿ.ಶ. 1044-ಕ್ರಿ.ಶ. 1068) ತನ್ನ ಅಳ್ವಿಕೆಯಲ್ಲಿ ಕಟ್ಟಿಸಿದ್ದಾನೆಂದು ಇತಿಹಾಸ ಹೇಳುತ್ತದೆ.ಕುರುವತ್ತಿ ರಥೋತ್ಸವಕ್ಕೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಸ್ವಚ್ಛತೆ, ಆಸ್ಪತ್ರೆ, ಬಸ್ ಸಂಚಾರ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಎಲ್ಲ ಕಡೆಗೂ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.