ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ದೇಶದ ಬಡವನು ಹಸಿವಿನಿಂದ ಬಳಲಬಾರದು ಅನ್ನ, ಆಶ್ರಯ, ಶಿಕ್ಷಣವು ಪ್ರತಿಯೊಬ್ಬರಿಗೂ ಸಿಗಬೇಕೆಂಬ ಆಶಯ ಡಾ. ಬಿ.ಆರ್. ಅಂಬೇಡ್ಕರ್ ಅವರದ್ದಾಗಿತ್ತು. ಸರಕಾರದ ಎಲ್ಲ ಯೋಜನೆಗಳು ಮಹಿಳೆಯರಿಗೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ರೈತರ ಬಾಳಿಗೆ ಬೆಳಕಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಹೇಳಿದರು.ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ಪುರಸಭೆ ವತಿಯಿಂದ ಆಯೋಜಿಸಿದ್ದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮಿ ೫ ಗ್ಯಾರಂಟಿ ಯೋಜನೆಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳ ಶ್ರಮದಿಂದಾಗಿ ರಾಜ್ಯದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ತಾಲೂಕಿನಲ್ಲಿ ಗೃಹಲಕ್ಷ್ಮಿ ೫೩,೧೦೮ ಅರ್ಜಿಗಳು ನೊಂದಣಿಯಾಗಿದ್ದು, ಅವುಗಳಲ್ಲಿ ೪೩,೩೪೦ ಫಲಾನುಭವಿಗಳಾಗಿದ್ದಾರೆ. ಗೃಹಲಕ್ಷ್ಮಿಯೋಜನೆಯಿಂದ ಸಾಕಷ್ಟು ಜನರಿಗೆ ಲಾಭವಾಗುತ್ತಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡುವ ಅಕ್ಕಿಯನ್ನು ಕೆಲವರು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಯಾರು ಉಚಿತ ಅಕ್ಕಿ ಮಾರಾಟ ಮಾಡಬೇಡಿ ಸರಕಾರದ ಯೋಜನೆಗಳ ಮುಖ್ಯ ಉದ್ದೇಶ ಬಡವರು ಮುಂದೆ ಬರಬೇಕು ಆರ್ಥಿಕವಾಗಿ ಸದೃಡವಾಗಬೇಕೆಂಬ ಸರಕಾರದ ಮಹತ್ವಾಂಕ್ಷೆಯಾಗಿದೆ ಎಂದರು.ತಾಲೂಕು ಪಂಚಾಯ್ತಿ ಇಓ ಶಂಕರ ರಾಠೋಡ ಮಾತನಾಡಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿಯೋಜನೆ, ಗೃಹಲಕ್ಷ್ಮಿ, ಯುವನಿಧಿ ಗ್ಯಾರಂಟಿ ಯೋಜನೆಗಳು ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಉಚಿತ ಪ್ರಯಾಣದಿಂದಾಗಿ ಮಹಿಳೆಯರು ಧಾರ್ಮಿಕ ಸ್ಥಳಗಳ, ಪ್ರವಾಸಿ ತಾಣ, ಬಸ್‌ಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ನಗರಪ್ರದೇಶದಲ್ಲಿರುವರು ಪ್ರತಿನಿತ್ಯ ತಮ್ಮ ಊರಿಗೆ ಹೋಗಿ ತಂದೆ ತಾಯಿಗಳೊಂದಿಗೆ ಮಾತನಾಡಿ ಬರುತ್ತಿದ್ದಾರೆ. ಸರಕಾರ ನೀಡುವ ೨ಸಾವಿರ ರು.ಗಳಿಂದ ಮಕ್ಕಳಿಗೆ ಪೌಸ್ಟಿಕ ಆಹಾರ ಶಿಕ್ಷಣಕ್ಕಾಗಿ ನೀಡಿರಿ ಎಂದು ಸಲಹೆ ನೀಡಿದರು.
ಚಿಂಚೋಳಿ ಬಸ್ ಘಟಕ ವ್ಯವಸ್ಥಾಪಕ ವಿಠಲ ಕದಮ್ ಮಾತನಾಡಿ, ಕಳೆದ ಜೂನ್ ತಿಂಗಳಿಂದ ೨೧,೨೮,೦೮೫ ಮಹಿಳೆಯರು ಉಚಿತ ಪ್ರಯಾಣ, ೭೨,೧೦೧ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು೨,೨೦,೦೧೮೬ ಮಹಿಳೆಯರು ಪ್ರಯಾಣಿಸಿದ್ದು ಇದರಿಂದಾಗಿ ಒಟ್ಟು ೬,೯೭,೫೭,೪೪೩ ರು. ಲಾಭವಾಗಿದೆ ಎಂದರು.ಜೆಸ್ಕಾಂ ಎಇಇ ಸುರೇಶ ಮಾತನಾಡಿ, ತಾಲೂಕಿನಲ್ಲಿ ೪೭,೨೬೩ ಅರ್ಜಿಗಳು ಬಂದಿವೆ. ಇದರಲ್ಲಿ ೪೧,೩೯೧ ನೊಂದಣೀಯಾಗಿವೆ. ೪೧,೨೩೪ ಫಲಾನುಭವಿಗಳಾಗಿದ್ದಾರೆ. ೩೫೯೦ ಅರ್ಜಿಗಳು ನೋಂದಣಿ ಆಗಿಲ್ಲ ಎಂದು ವಿವರಿಸಿದರು.
ಸಮಾರಂಭದಲ್ಲಿ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಣಾಧಿಕಾರಿ ಗುರುಪ್ರಸಾದ ಕವಿತಾಳ ಮಾತನಾಡಿ, ಗೃಹಲಕ್ಷ್ಮೀಯೋಜನೆ ಅಡಿಯಲ್ಲಿ ೫೩,೧೩೫ ಅರ್ಜಿಗಳು ಬಂದಿದ್ದು ಇವುಗಳಲ್ಲಿ ೪೮ ಸಾವಿರ ಅರ್ಜಿಗಳು ವಿಲೇವಾರಿ ಆಗಿವೆ. ಇನ್ನುಳಿದ ಅರ್ಜಿಗಳು ಆಧಾರ್ ನಂಬರ್, ಬ್ಯಾಂಕ್ ಖಾತೆ ತಾಂತ್ರಿಕ ತೊಂದರೆಯಿಂದ ಜೋಡಣೆ ಆಗಿಲ್ಲ ಎಂದರು.ಮಹಿಳಾ ಫಲಾಭವಿಗಳಾದ ನರಸಮ್ಮ ಆವಂಟಿ, ಜ್ಯೋತಿರೆಡ್ಡಿ, ಲಕ್ಷ್ಮಿಪ್ರಭಾಕರರೆಡ್ಡಿ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದರು.