ಜಿಪಂ ತಾಪಂ ಚುನಾವಣೆಗೆ ಗ್ಯಾರಂಟಿ ಯೋಜನೆಗಳು ದಿಕ್ಸೂಚಿ

| Published : Jan 23 2025, 12:47 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ಫೆಬ್ರವರಿ ಮೊದಲ ವಾರದಿಂದ ಗ್ರಾಮ ಪಂಚಾಯಿತಿಗಳ ಪ್ರವಾಸವನ್ನು ಕೈಗೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ ಗೌಡ ತಿಳಿಸಿದರು. ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಸೌಲಭ್ಯಗಳು ದೊರೆಯುತ್ತಿಲ್ಲದಿದ್ದರೆ ಸ್ಥಳದಲ್ಲಿ ಅಧಿಕಾರಿಗಳ ಜೊತೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ. ತಾಲೂಕಿನಲ್ಲಿ ಒಟ್ಟು ೪೦ ಗ್ರಾಮ ಪಂಚಾಯಿತಿಗಳಿದ್ದು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ಫೆಬ್ರವರಿ ಮೊದಲ ವಾರದಿಂದ ಗ್ರಾಮ ಪಂಚಾಯಿತಿಗಳ ಪ್ರವಾಸವನ್ನು ಕೈಗೊಳ್ಳಲಾಗುವುದು ಎಂದು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ ಗೌಡ ತಿಳಿಸಿದರು. ಅವರು ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನಾ ಸಮಿತಿಯ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅನ್ನಭಾಗ್ಯಕ್ಕೆ ೪,೦೭,೧೫,೬೮೦ ಹಣ ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ ೧೫,೭೧,೧೮,೦೦೦, ಶಕ್ತಿ ಯೋಜನೆ ೨,೩೪,೪೨,೮೯೯, ಗೃಹ ಜ್ಯೋತಿ ೨,೮೨,೨೦,೦೦೦, ಯುವ ನಿಧಿಗೆ ೧೭,೪೩,೦೦೦ ಸೇರಿ ಒಟ್ಟು ೨೫,೧೨,೨೫,೫೭೯ ರು. ಗಳು ಪ್ರತಿತಿಂಗಳು ಸರ್ಕಾರ ತಾಲೂಕಿಗೆ ಅನುದಾನವನ್ನು ನೀಡುತ್ತಿದ್ದು, ಈ ಯೋಜನೆಗಳಿಂದ ಜನರಿಗೆ ಆರ್ಥಿಕ ಮಟ್ಟವನ್ನು ಸರಿದೂಗಿಸಿಕೊಳ್ಳಲು ಬಡ ಮಕ್ಕಳ ಕುಟುಂಬ ನಿರ್ವಹಣೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ದಿನನಿತ್ಯದ ಖರ್ಚು ವೆಚ್ಚಕ್ಕೆ ತುಂಬಾ ಸಹಕಾರಿಯಾಗುತ್ತಿದೆ. ಶಕ್ತಿ ಯೋಜನೆಯಿಂದ ಬಡ ಮಹಿಳೆಯರು ತೀರ್ಥಕ್ಷೇತ್ರಗಳಿಗೆ ಹಾಗೂ ದೇವಸ್ಥಾನಗಳಿಗೆ ಹೋಗಲು ಸಹಾಯವಾಗಿದ್ದು ರಾಜ್ಯದ ಉದ್ದಗಲಕ್ಕೂ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಹಾಗೂ ಮುಜರಾಯಿ ಇಲಾಖೆಗೆ ಆರ್ಥಿಕತೆ ಹೆಚ್ಚಾಗಿದ್ದು ಜನರ ಹಾಗೂ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಿದೆ. ಫೆಬ್ರವರಿ ಮೊದಲನೇ ವಾರದಿಂದ ಹೋಬಳಿವಾರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಭೆಗಳನ್ನು ನಡೆಸಿ ೫ ಯೋಜನೆಯ ಫಲಾನುಭವಿಗಳ ಸಭೆ ನಡೆಸಿ ಪಾರದರ್ಶಕತೆ ಬಗ್ಗೆ ಚರ್ಚಿಸಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಸೌಲಭ್ಯಗಳು ದೊರೆಯುತ್ತಿಲ್ಲದಿದ್ದರೆ ಸ್ಥಳದಲ್ಲಿ ಅಧಿಕಾರಿಗಳ ಜೊತೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ. ತಾಲೂಕಿನಲ್ಲಿ ಒಟ್ಟು ೪೦ ಗ್ರಾಮ ಪಂಚಾಯಿತಿಗಳಿದ್ದು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಲಾಗುವುದು ಎಂದರು.

ಚನ್ನರಾಯಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಿದ್ದು ಸಂಜೆ ಸಮಯದಲ್ಲಿ ಬಸ್ಸಿಗಾಗಿ ಸಾಕಷ್ಟು ಸಮಸ್ಯೆಯಾಗಿದ್ದು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಐದು ಯೋಜನೆ ನೀಡಿ ಜನರಿಗೆ ಉತ್ತಮ ಜೀವನ ಕಂಡುಕೊಳ್ಳಲು ಸಹಕಾರಿಯಾಗಿದ್ದಾರೆ. ಆದರೆ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಟೀಕೆಗಳನ್ನ ಮಾಡುತ್ತಿದ್ದು, ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಪ್ರಚಾರವನ್ನು ನಡೆಸುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಗ್ಯಾರಂಟಿ ಯೋಜನೆಗಳು ದಿಕ್ಸೂಚಿಯಾಗಲಿದ್ದು ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲದಿಂದಾಗಿ ಕಾಂಗ್ರೆಸ್‌ಗೆ ಜನರು ಮತ ನೀಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಸತ್ಯ ಎಂದರು.

ಮಾಜಿ ಶಾಸಕರಾದ ಸಿ ಎಸ್ ಪುಟ್ಟೇಗೌಡರ ಮಾರ್ಗದರ್ಶನದಲ್ಲಿ ಮಾಜಿ ಶಾಸಕರಾದ ಎಂ.ಎ. ಗೋಪಾಲಸ್ವಾಮಿ ಅವರ ನಿರ್ದೇಶನದಂತೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾದ ಪಿಎ ಮಂಜೇಗೌಡರವರ ಸಹಕಾರದೊಂದಿಗೆ ತಾಲೂಕಿನಲ್ಲಿ ಪಕ್ಷ ಸಂಘಟನೆ ಚೆನ್ನಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ ಎಂದರು.ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮರ್ಪಕವಾಗಿ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ಕೆ ಆರ್‌ ನಾಗೇಶ್, ಎಸ್.ಎಂ. ಜನಾರ್ದನ್, ಎಸ್. ಎಂ. ನವೀನ್ ಕುಮಾರ್, ಕೆ. ಎನ್. ನಾಗೇಶ್, ಎಚ್. ಆರ್. ಪ್ರಕಾಶ್, ಸಿ. ಎನ್. ಗಣೇಶ್, ಬಿ.ಆರ್‌. ಕೆಂಪೇಗೌಡ, ಸುರೇಶ್ ಲಕ್ಕಿಹಳ್ಳಿ, ಹಾಗೂ ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು ಹಾಜರಿದ್ದರು.