ಸಾರಾಂಶ
ಹಾನಗಲ್ಲ: ಗ್ಯಾರಂಟಿ ಯೋಜನೆಗಳು ಬಡವರು, ಮಧ್ಯಮ ವರ್ಗದ ಕುಟುಂಬಗಳ ಬದುಕು ಬದಲಿಸಿವೆ, ಈ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಇದನ್ನು ಸಹಿಸದ, ಜೀರ್ಣಿಸಿಕೊಳ್ಳದ ಪಟ್ಟಭದ್ರ ಹಿತಾಸಕ್ತಿಗಳು, ತಾಯಿ ಹೃದಯ ಇಲ್ಲದವರು ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಆಯೋಜಿಸಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಕಾರಣ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹೊಸ ಭರವಸೆಗಳೊಂದಿಗೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ತಾಲೂಕಿನ 60 ಸಾವಿರಕ್ಕೂ ಅಧಿಕ ಕುಟುಂಬಗಳು ವಾರ್ಷಿಕ 50 ರಿಂದ 60 ಸಾವಿರ ರು. ಗಳ ಆರ್ಥಿಕ ನೆರವು ಪಡೆಯುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳಿಂದ ತಾಲೂಕಿಗೆ ಕಳೆದ 2 ವರ್ಷಗಳಲ್ಲಿ 500 ಕೋಟಿ ರು. ಆರ್ಥಿಕ ನೆರವು ಸಿಕ್ಕಿದೆ. ಇದರಿಂದ ಮಹಿಳೆಯರ ಖರೀದಿ ಶಕ್ತಿ ಹೆಚ್ಚಿ, ವ್ಯಾಪಾರಕ್ಕೆ ಜೀವ ತುಂಬಿದೆ. ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರ ಜೀವನಮಟ್ಟ ಸುಧಾರಿಸುವ ಏಕೈಕ ಉದ್ದೇಶದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು. ಕಳೆದ ಐದಾರು ತಿಂಗಳಿನಿಂದ ಮಳೆ ಬೀಳುತ್ತಿರುವ ಕಾರಣ ರಸ್ತೆಗಳು ಹದಗೆಟ್ಟಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದ್ದು ರಸ್ತೆಗಳನ್ನು ಸುಧಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಭೂ-ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರದ ದೊಡ್ಡಸ್ತಿಕೆ ಇಲ್ಲವೆನ್ನುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಸಾವಿರಾರು ಕುಟುಂಬಗಳು ಖಾತ್ರಿ ಇಲ್ಲದ ಬದುಕು ಸಾಗಿಸುತ್ತಿದ್ದರು. ಮನೆ ಮಾಲಿಕತ್ವ ಇಲ್ಲದೇ ಪರದಾಡುತ್ತಿದ್ದರು. ಬ್ಯಾಂಕ್ ಸಾಲ, ಮನೆ ಬಿದ್ದರೆ ಪರಿಹಾರ, ಯಾವುದೇ ಸೌಲಭ್ಯ ಇಲ್ಲದೇ ಅತಂತ್ರ ಬದುಕು ಸಾಗಿಸುತ್ತಿದ್ದರು. ಅಂಥ ಕುಟುಂಬಗಳಿಗೆ ಶಾಶ್ವತವಾಗಿ ಮನೆ ಮಾಲಿಕತ್ವ ನೀಡಲಾಗಿದೆ. ಸಾವಿರಾರು ಕುಟುಂಬಗಳನ್ನು ಸ್ವತಂತ್ರಗೊಳಿಸುತ್ತಿರುವ ಸಾರ್ಥಕ ಭಾವನೆ ನನ್ನಲ್ಲಿದೆ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಹಾನಗಲ್ಲ ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಗ್ಯಾರಂಟಿ ಯೋಜನೆ ಟೀಕಿಸಿದ ವಿರೋಧ ಪಕ್ಷಗಳು ಬೇರೆ, ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದ್ದು, ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ದೊಡ್ಡ ಪ್ರಮಾಣದ ಆರ್ಥಿಕ ನೆರವು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲ್ಪಡುತ್ತಿದೆ. ಮಹಿಳೆಯರು ಬಹಳ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಉಳಿತಾಯ ಮಾಡುತ್ತಿದ್ದಾರೆ ಎಂದರು. ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ ಜಮಾದಾರ, ಮಂಜು ಗೊರಣ್ಣನವರ, ಹನುಮಂತಪ್ಪ ಮರಗಡಿ, ಭರಮಣ್ಣ ಶಿವೂರ, ಶಿವು ಭದ್ರಾವತಿ, ತಾಪಂ ಇಓ ಪರಶುರಾಮ ಪೂಜಾರ, ಸಿಡಿಪಿಒ ರಾಮೂ ಬೈಲಸೀಮೆ ಸೇರಿದಂತೆ ಗ್ರಾಪಂ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))