ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ: ಎಚ್.ಎಂ. ರೇವಣ್ಣ

| Published : Jun 14 2024, 01:08 AM IST / Updated: Jun 14 2024, 01:27 PM IST

ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ: ಎಚ್.ಎಂ. ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಜನರ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಮಾಡಿರುವ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

 ಕಡೂರು :  ಜನರ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಮಾಡಿರುವ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.ಕಡೂರು ಪಟ್ಟಣದ ಸುರುಚಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿ ಮಾಡಿರುವ ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ ಸೇರಿದಂತೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿದ ಭರವಸೆಯಂತೆ ಚುನಾವಣೆ ಫಲಿತಾಂಶದ ಮಾರನೇ ದಿನವೇ ಗ್ಯಾರಂಟಿ ಘೋಷಣೆ ಜಾರಿ ಮಾಡಿ ದಾಖಲೆ ಮಾಡಿದೆ. ಇದನ್ನು ಸಹಿಸದ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಸಮಿತಿ ಅಧ್ಯಕ್ಷರಾಗಿರುವ ತಾವು ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.

ವಿಶೇಷ ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯನವರು 3.5 ಲಕ್ಷ ಕೋಟಿ ಬಜೆಟ್ ಅನ್ನು ಈ ಬಾರಿ ಮಂಡಿಸಿದ್ದು, ಶಕ್ತಿ ಯೋಜನೆಯಲ್ಲಿ ಸುಮಾರು 33,000 ಕೋಟಿ ರು. ಮಹಿಳೆಯರ ಉಚಿತ ಪ್ರಯಾಣಕ್ಕೆ ನೀಡುತ್ತಿದೆ. ಜನರಿಗೆ ಉತ್ತಮ ಆಡಳಿತ ಕೊಡುವ ಮೂಲಕ ಸ್ಪಂದಿಸುತ್ತಿದೆ ಎಂದರು.ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲ ಅಂಶಗಳ ಕಾರಣದಿಂದ ಕಾಂಗ್ರೆಸ್ ಪಕ್ಷ ಕೇವಲ ಒಂದೇ ಸ್ಥಾನದಲ್ಲಿದ್ದ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವುದು ಗ್ಯಾರಂಟಿಗಳ ಕಾರಣದಿಂದ ಎಂದು ಸ್ಪಷ್ಟವಾಗುತ್ತಿದೆ ಎಂದರು.ಸಿದ್ದರಾಮಯ್ಯ ನೇತೃತ್ವದಲ್ಲಿ 2013ರಲ್ಲೂ ಭರವಸೆಯಂತೆ 165 ಯೋಜನೆಗಳನ್ನು ರಾಜ್ಯದ ಜನ ಸಾಮಾನ್ಯರಿಗೆ ರೂಪಿಸಿ ಯಶಸ್ವಿಯಾಗಿ ಐದು ವರ್ಷ ಪೂರ್ಣಗೊಳಿಸಿತು. ಈಗಿನ 30% ಮತಗಳು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ನಮ್ಮ ಪರವಾಗಿ ಬಂದಿದೆ ಎಂದು ಹೇಳಿದರು.

ಬಡವರ ಬದುಕು ಹಸನಾಗಲು ಮತ್ತು ಆರ್ಥಿಕವಾಗಿಯೂ ಸ್ವಾವಲಂಬಿಯಾಗಲು ಕಾಂಗ್ರೆಸ್ ಸರಕಾರ ಉತ್ತಮ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡುತ್ತಿದೆ.ಆದರೆ ಬಿಜೆಪಿಯವರು ಅಧಿಕಾರಕ್ಕೋಸ್ಕರ ಧರ್ಮ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅಧಿಕಾರ ಪಡೆಯುವ ಮಾರ್ಗದಲ್ಲಿ ಇದ್ದಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಇಂದಿರಾ ಗಾಂಧಿ ಯವರು ತಂದ 20 ಅಂಶಗಳ ಕಾರ್ಯಕ್ರಮದಿಂದ ರೈತರಿಗೆ ಬಡವರಿಗೆ ಅನುಕೂಲವಾಯಿತು.ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸುರವರ ಪ್ರೇರಣೆಯಿಂದ ತಾವು ವಿದ್ಯಾರ್ಥಿ ನಾಯಕನಾಗಿ ಬಂದೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದ ದೇವರಾಜ ಅರಸು ಮಾದರಿಯಾಗಿದ್ದಾರೆ.

ಅದೇ ರೀತಿ ಇಂದು ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಮೂಲಕ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಯೋಜನೆ ಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಅದೇ ರೀತಿ ವೀರಪ್ಪ ಮೊಯ್ಲಿ ಅವರು ಸಿಇಟಿ ಮಾಡುವ ಮೂಲಕ ಬಡವರು ಕೂಡ ಉನ್ನತ ಶಿಕ್ಷಣ ಪಡೆಯ ಬೇಕೆಂದು ಜಾರಿಯಾಯಿತು. ದೇವರಾಜ ಅರಸ್ ಮೀಸಲಾತಿ ಜಾರಿಗೆ ತಂದು ಎಲ್ ಜೆ ಹಾವನೂರ್ ವರದಿಯನ್ನು ಜಾರಿಗೆ ತಂದರು. ಅದೇ ರೀತಿ ಸಿದ್ದರಾಮಯ್ಯ ಎಲ್ಲ ವರ್ಗದ ಜನರಿಗೆ ಸವಲತ್ತು ಸಿಗುವ ರೀತಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಸೋಲಿಸಿರುವ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಕಾಂಗ್ರೆಸ್ ಮುಖಂಡರಾದ ಗೋವಿಂದ ರಾಜ್, ಕೆರೆಸಂತೆ ಸೋಮಶೇಖರ್, ಟೊಮ್ಯಾಟೊ ಗೌಡ,ಶ್ರೀಕಂಠ ಒಡೆಯರ್, ವಿಜಯ್, ಶ್ರೀನಿವಾಸ್, ಧನುಷ್, ಚಿಕ್ಕಣ್ಣ ಮತ್ತಿತರರು ಇದ್ದರು.