ಗ್ಯಾರೆಂಟಿಯಿಂದ ರಾಜ್ಯ ದಿವಾಳಿಯಾಗದು: ಮಧು ಬಂಗಾರಪ್ಪ

| Published : Feb 19 2024, 01:31 AM IST

ಗ್ಯಾರೆಂಟಿಯಿಂದ ರಾಜ್ಯ ದಿವಾಳಿಯಾಗದು: ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ ಪಟ್ಟಣದ ಆಡಳಿತ ಸೌಧದ ಹಿಂಭಾಗದಲ್ಲಿನ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಪುರಸಭೆ ವತಿಯಿಂದ ನಡೆದ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಾಜ್ಯದ ಸರ್ಕಾರ ಜಾರಿಗೊಳಿಸಿದ ಎಲ್ಲ ಗ್ಯಾರೆಂಟಿ ಯೋಜನೆ ಎಲ್ಲ ವರ್ಗದ ಜನತೆಯ ಮನ ಗೆದ್ದಿದ್ದು ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆ ಸಮಿತಿಯಲ್ಲಿ ನಾನು ಇದ್ದು ಯೋಜನೆಯ ಸೃಷ್ಟಿಕರ್ತ ಎಂಬ ಹಿರಿಮೆಯನ್ನು ಹೊಂದಿರುವುದಾಗಿ ಶಿಕ್ಷಣ ಹಾಗೂ ಸಾಕ್ಷರತಾ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಭಾನುವಾರ ಪಟ್ಟಣದ ಆಡಳಿತ ಸೌಧದ ಹಿಂಭಾಗದಲ್ಲಿನ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಪುರಸಭೆ ವತಿಯಿಂದ ನಡೆದ ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಗ್ಯಾರೆಂಟಿ ಯೋಜನೆಗಳ ಬಗ್ಗೆ ವಿಶ್ವಾಸವಿಟ್ಟು ಜನತೆ ಮತ ನೀಡಿ ಗೆಲ್ಲಿಸಿದ್ದು, ಈ ಸರ್ಕಾರ ಕೇವಲ ಸಿದ್ದರಾಮಯ್ಯ ನವರ ಸರ್ಕಾರವಲ್ಲ ಇದು ರಾಜ್ಯದ 7 ಕೋಟಿ ಜನತೆಯ ಸರ್ಕಾರ ಎಂದ ಅವರು ಶಿಕಾರಿಪುರ ಎಂದಿಗೂ ನೆಂಟರ ಬೀಗರ ಮನೆ ರೀತಿಯಾಗಿದ್ದು, ಬರಗಾಲದ ಸಂದರ್ಭದಲ್ಲಿ ಬಂಗಾರಪ್ಪನವರು ಭತ್ತ, ಬೀಜ, ಜೋಳ ನೀಡಿದ್ದನ್ನು ಮರೆಯದ ಇಲ್ಲಿನ ಜನತೆ ಬಂಗಾರಪ್ಪನವರಿಗೆ ದೇಶ ನೋಡುವ ರಾಜಕೀಯ ಶಕ್ತಿಯನ್ನು ತಂದು ಕೊಟ್ಟಿದ್ದಾರೆ ಬಂಗಾರಪ್ಪನವರು ಇಲ್ಲಿಗೆ ಬಂದಾಗ ಜೋಳದ ಹಾರ ಹಾಕಿ ಸಂಭ್ರಮಿಸಿದ್ದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಬಂಗಾರಪ್ಪನವರು ಜೋಳ ಭತ್ತ ಬೀಜ ನೀಡಿದಾಗ ತಾವು ಸಹ ಕಿರುಕಾಣಿಕೆಯನ್ನು ನೀಡಿದ್ದಾಗಿ ಸ್ಮರಿಸಿಕೊಂಡರು.

ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ, ರೈತರ ಪಂಪಸೆಟ್ ಗೆ 10 ಎಚ್ಪಿ ಉಚಿತ ವಿದ್ಯುತ್ ಸಹಿತ ಹಲವು ಯೋಜನೆ ರೂಪಿಸಿದ್ದು, ಅವರ ಯೋಜನೆಯನ್ನು ನಿಲ್ಲಿಸುವ ತಾಕತ್ತು ಧಮ್ಮು ಯಾರಿಗೂ ಇಲ್ಲ ಎಂದ ಅವರು ಇದೀಗ ಸರ್ಕಾರ ಜಾರಿಗೊಳಿಸಿದ ಗ್ಯಾರೆಂಟಿ ಯೋಜನೆಗಳು ಎಲ್ಲ ವರ್ಗದ ಜನರ ಮನಗೆದ್ದಿದ್ದು, ಚುನಾವಣಾ ಸಂದರ್ಭದಲ್ಲಿ ರೂಪಿಸಿದ ಎಲ್ಲ ಗ್ಯಾರೆಂಟಿ ಯೋಜನೆ ಸಮಿತಿಯಲ್ಲಿ ನಾನು ಇದ್ದು ಗ್ಯಾರೆಂಟಿಯ ಸೃಷ್ಟಿಕರ್ತ ಎಂಬ ಹೆಗ್ಗಳಿಕೆಯನ್ನು ಹೊಂದಿರುವುದಾಗಿ ಅವರು ತಿಳಿಸಿದರು.

ಗ್ಯಾರೆಂಟಿ ಹಣ ನಮ್ಮ ಮನೆಯದ್ದಲ್ಲ, ಸಿದ್ದರಾಮಯ್ಯನವರದ್ದಲ್ಲ ಅದು ನಿಮ್ಮ ತೆರಿಗೆ ಹಣ ಅದನ್ನು ವಾಪಾಸ್ ನಿಮಗೆ ಕೊಡುವುದು ತಪ್ಪಾ? ಗ್ಯಾರೆಂಟಿಯಿಂದ ರಾಜ್ಯ ಹರಾಜು ಆಗಲಿದೆ ಎಂದು ಅಪಪ್ರಚಾರ ಹೆಚ್ಚಾಗಿದ್ದು, ಏನೂ ಆಗುವುದಿಲ್ಲ 5 ವರ್ಷ ಪೂರ್ತಿ 5 ಗ್ಯಾರೆಂಟಿ ಜತೆಗೆ ಹೊಸದನ್ನು ಸರ್ಕಾರ ನೀಡಲಿದೆ ಗ್ಯಾರೆಂಟಿ ಪ್ರತಿಯೊಬ್ಬರಿಗೂ ತಲುಪಬೇಕು ಸರ್ಕಾರ ನಿಮ್ಮ ಮಡಿಲಿನಲ್ಲಿದ್ದು, ಉಳಿಸುವ ಪ್ರಯತ್ನ ರಕ್ಷಿಸುವ ಶಕ್ತಿ ನೀಡುವ ಕೆಲಸವನ್ನು ನೀವು ಮಾಡಬೇಕು ಎಂದರು.

ಸೊರಬ ಶಾಸಕನಾದ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ನೀರಾವರಿಗಾಗಿ ಪಾದಯಾತ್ರೆ ಕೈಗೊಂಡಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸೊರಬ, ಶಿಕಾರಿಪುರ ನೀರಾವರಿ ಯೋಜನೆಗೆ ಮಂಜೂರಾದ ಅನುದಾನ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶಿಲಾನ್ಯಾಸ ನಡೆದು ಅನುಷ್ಠಾನಗೊಂಡಿದೆ. ಇದೀಗ ಕೆಲವೆಡೆ ನೀರು ಬರುತ್ತಿಲ್ಲ ಇದರ ಜವಾಬ್ದಾರಿ ನನಗೆ ಬಿಡಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಶಿಕಾರಿಪುರ ಬಗ್ಗೆ ಬಂಗಾರಪ್ಪ ಹಾಗೂ ಮಧುರವರಿಗೆ ಅಪಾರ ವಿಶ್ವಾಸವಿದ್ದು ಬರಗಾಲದಲ್ಲಿ ನೀಡಿದ ಭತ್ತ, ಬೀಜ, ಜೋಳವನ್ನು ಜನತೆ ಮರೆಯಲು ಸಾಧ್ಯವಿಲ್ಲ ಇದೀಗ ಪುನಃ ಶಕ್ತಿ ಬಂದಿದೆ ಎಂದರು.

ಪುರಸಭಾ ಸದಸ್ಯ ನಾಗರಾಜಗೌಡ ಮಾತನಾಡಿ, ಸಚಿವರ ಪಾದಯಾತ್ರೆ ಫಲವಾಗಿ ಏತ ನೀರಾವರಿ ಜಾರಿಗೊಂಡಿದ್ದು,ಇದೀಗ ಅಂತರ್ಜಲ ಹೆಚ್ಚಲು ಕಾರಣವಾಗಿದ್ದಾರೆ ಬೀಜದಂತೆ ವೃಕ್ಷ ತಂದೆಯಂತೆ ಮಗ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಪ್ರಾಸ್ಥಾವಿಕವಾಗಿ ಸಾಗರ ಉಪವಿಭಾಗಾದಿಕಾರಿ ಯತೀಶ್ ಮಾತನಾಡಿದರು. ಸಾಂಕೇತಿಕವಾಗಿ ಯುವನಿಧಿಯಡಿ ಪುರಸಭೆ ವತಿಯಿಂದ ಲ್ಯಾಪ್ ಟ್ಯಾಪ್ ಗೆ ಸಹಾಯಧನ ಚೆಕ್ ಸಚಿವರು ವಿತರಿಸಿದರು. ವೇದಿಕೆಯಲ್ಲಿ ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಮುಖಂಡ ಗೋಣಿ ಮಾಲತೇಶ್,ನಗರದ ಮಹಾದೇವಪ್ಪ,ತಹಸೀಲ್ದಾರ್ ಮಲ್ಲೇಶ ಪೂಜಾರ್ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿಮಾಲ್ಟ್

ರಾಜ್ಯದಲ್ಲಿ 76 ಸಾವಿರ ಸರ್ಕಾರಿ, ಅನುದಾನಿತ ಶಾಲೆಗಳಿದ್ದು 1.20 ಕೋಟಿ ಮಕ್ಕಳಿಗೆ ಶಿಕ್ಷಣ ನೀಡುವ ಬೃಹತ್ ಇಲಾಖೆಗೆ ಸಚಿವನಾಗಿ ಮಕ್ಕಳ ಸೇವೆ ಮಾಡುವ ಅವಕಾಶ ಮುಖ್ಯಮಂತ್ರಿಗಳು ಕಲ್ಪಿಸಿಕೊಟ್ಟಿದ್ದಾರೆ. ಈ ಬಾರಿ ರು.44.5 ಸಾವಿರ ಕೋಟಿ ಅನುದಾನ ನೀಡಿದ್ದು, ಭವಿಷ್ಯದಲ್ಲಿ ಎಲ್ಲ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೇ ದಾಖಲಿಸುವ ರೀತಿಯಲ್ಲಿ ಸಾಧಿಸಿ ತೋರಿಸುವುದಾಗಿ ತಿಳಿಸಿದರು. ಅಲ್ಲದೆ, ಇದೀಗ ಮಕ್ಕಳಿಗೆ ಹಾಲು ಮೊಟ್ಟೆ ನೀಡುತ್ತಿದ್ದು, ಇದೇ 22 ಅಥವಾ 27 ರಿಂದ ಹಾಲಿಗೆ ರಾಗಿ ಮಾಲ್ಟ್ ಸೇರಿಸಿ ನೀಡುವ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.