ಸಾರಾಂಶ
ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲಆಲದಕಟ್ಟಿಯಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ೧೪೬ ಅರ್ಜಿಗಳು ಸಲ್ಲಿಕೆಯಾದರೂ ಸ್ಥಳದಲ್ಲಿ ಒಂದೂ ಅರ್ಜಿ ವಿಲೇವಾರಿ ಆಗಲಿಲ್ಲ. ಕಂದಾಯ ಇಲಾಖೆಯದ್ದೇ ಸಿಂಹ ಪಾಲು. ೧೫ ದಿನಗಳ ಗಡುವಿನಲ್ಲಿ ಎಲ್ಲದಕ್ಕೂ ಪರಿಹಾರ ಹಿಂಬರಹ ನೀಡುವ ಭರವಸೆ ಮಾತ್ರ ಸಾಧ್ಯವಾಯಿತು.ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಲದಕಟ್ಟಿಯ ನಿಸ್ಸೀಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ ಹಾನಗಲ್ಲ ತಾಲೂಕು ಮಟ್ಟದ ಜನಸ್ಪಂದನದಲ್ಲಿ ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರು ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಒಟ್ಟಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಅನುವು ಮಾಡಿದರು. ಜಿಲ್ಲೆ ತಾಲೂಕಿನಿಂದ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಸರದಿಗಾಗಿ ಕಾಯುತ್ತಿದ್ದರು.ಬಂದ ಅರ್ಜಿಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹ ಪಾಲು. ೮೯ ಅರ್ಜಿಗಳು ಸಲ್ಲಿಕೆಯಾಗಿವೆ. ಹೊಲದ ರಸ್ತೆ, ಬೆಳಗಾಲಪೇಟೆ ಹೋಬಳಿ ಮಾಡಬೇಕು, ಆಕ್ರಮ ಸಕ್ರಮ ಹಕ್ಕುಪತ್ರ ನೀಡಬೇಕು. ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿಗಳೇ ಇದರಲ್ಲಿ ಬಹುಪಾಲು. ಉತಾರಗಳಲ್ಲಿ ಹೆಸರು ಬದಲಾವಣೆ, ಆಧಾರ ಸಮಸ್ಯೆ, ವಿಶೇಷ ಚೇತನರು, ವ್ಯದ್ಧಾಪ್ಯ ವೇತನಕ್ಕೆ ಸಲ್ಲಿಸಿದ ಅರ್ಜಿಗಳಲ್ಲಿ ತಾಂತ್ರಿಕ ದೋಷ ಪರಿಹರಿಸಿ ಸಮಸ್ಯೆ ಪರಿಹರಿಸಬೇಕಾಗಿದೆ. ಹಳೇಗೆಜ್ಜಿಹಳ್ಳಿ ಗ್ರಾಮಕ್ಕೆ ಸ್ಮಶಾನ ಬೇಕು ಎಂಬ ಬೇಡಿಕೆ ಇದೆ. ಕಾರ್ಮಿಕ ಕಾರ್ಡಿನದು ದೊಡ್ಡ ಸಮಸ್ಯೆ. ಕಾರ್ಮಿಕರಲ್ಲದವರಿಗೆ ಕಾರ್ಡ್ ಸಿಕ್ಕಿದೆ. ನಿಜವಾದ ಕಾರ್ಮಿಕರಿಗೆ ಕಾರ್ಡ್ ಸಿಗುತ್ತಿಲ್ಲ. ಕಚೇರಿಗೆ ಅಲೇದಾಡಿ ಸಾಕಾಗಿದೆ ಎನ್ನುತ್ತಾರೆ ಕಾರ್ಮಿಕರು. ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಂದ ೧೫ ದಿನಗಳಲ್ಲಿ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಮಾತ್ರ ಸಿಕ್ಕಿದೆ.ತಾಲೂಕು ಪಂಚಾಯಿತಿಯಿಂದ ಪರಿಹರಿಸಬೇಕಾದ ೩೪ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಆಶ್ರಯ ಮನೆಯದ್ದೇ ದೊಡ್ಡ ಸಂಖ್ಯೆ. ವಿವಿಧ ವಸತಿ ಯೋಜನೆಯಲ್ಲಿ ತಮ್ಮ ಬೇಡಿಕೆ ಈಡೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆಶ್ರಯ ಮನೆ, ಅಂಗನವಾಡಿ ಹೊಸ ಕಟ್ಟಡ, ಬಚ್ಚಲು ಗುಂಡಿ ನಿರ್ಮಾಣ, ಮನೆಯ ಜಾಗೆ ಪಟ್ಟಾ, ಆಶ್ರಯ ಮನೆ ಕಟ್ಟುವ ಬಿಲ್ಲು ಆಗದಿರುಪವುದು, ಚಂದ್ರಗಿರಿ ಗ್ರಾಮವನ್ನು ಆಲದಕಟ್ಟಿ ಗ್ರಾಪಂನಿಂದ ಬೆಳಗಾಲಪೇಟೆ ಗ್ರಾಪಂಗೆ ಸೇರಿಸುವುದು. ಆಸ್ತಿ ಅತಿಕ್ರಮಣ ಸಮಸ್ಯೆ, ಆಸ್ತಿ ಖಾತೆ ಬದಲಾವಣೆ, ದನದ ಕೊಟ್ಟಿಗೆ ನಿರ್ಮಾಣಕ್ಕೆ ಒತ್ತಾಯ, ಸರಕಾರಿ ರಸ್ತೆ ಅತಿಕ್ರಮಣ ತೆರವು ಸೇರಿದಂತೆ ಅರ್ಜಿಗಳು ಬಂದಿವೆ.ಆಲದಕಟ್ಟಿಯ ತೇರುಬೀದಿಯಲ್ಲಿನ ಅಡತಡೆಗಳನ್ನು ತೆರವುಗೊಳಿಸಬೇಕು ಎಂದು ವಿನಂತಿಸಲಾಗಿದೆ. ಚಂದ್ರಗಿರಿ ಗ್ರಾಮದ ರಸ್ತೆ ಸುಧಾರಣೆಗೆ ಅರ್ಜಿ ಸಲ್ಲಿಸಲಾಗಿದೆ. ಹೆಸ್ಕಾಂನಿಂದ ಆಕ್ರಮ ಸಕ್ರಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸುವ ಬೇಡಿಕೆ ಇದೆ. ಬಸ್‌ಗಾಗಿ ಕೆಎಸ್‌ಆರ್‌ಟಿಸಿಗೆ ಮನವಿ ಬಂದಿವೆ. ಪುರಸಭೆ, ಪಶು ಸಂಗೋಪನಾ, ಹೆಸ್ಕಾಂ, ಸಮಾಜ ಕಲ್ಯಾಣ, ಕೃಷಿ, ಆರೋಗ್ಯ ಇಲಾಖೆಗಳಿಗೆ ವಿರಳ ಅರ್ಜಿಗಳು ಬಂದಿವೆ. ಈಗಾಗಲೇ ಹಲವು ಬಾರಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಟ್ಟಿರುವುದು, ನಿರಂತರವಾಗಿ ತಾಲೂಕು ಆಡಳಿತ ಇಂತಹ ಸಮಸ್ಯೆಗಳ ಬಗೆಗೆ ಗಮನ ಹರಿಸಿರುವುದು ಅರ್ಜಿಗಳ ಸಂಖ್ಯೆ ಇಳಿಮುಖವಾಗಲು ಕಾರಣ ಎನ್ನಲಾಗಿದೆ.ಜನಸ್ಪಂದನದಲ್ಲಿ ವಿವಿಧ ಇಲಾಖೆಗೆ ಸಲ್ಲಿಕೆಯಾದ ೧೪೬ ಸಮಸ್ಯೆಯ ಅರ್ಜಿಗಳ ವಿಲೇವಾರಿಗೆ ೧೫ ದಿನಗಳಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಅನುದಾನ ಆಧರಿಸಿದ, ಕಾನೂನಾತ್ಮಕ ಸಮಸ್ಯೆ ಇರುವ ಅರ್ಜಿಗಳ ಬಗೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಇಲಾಖೆಗಳು ೧೫ ದಿನಗಳಲ್ಲಿ ಎಲ್ಲ ಅರ್ಜಿಗಳಲ್ಲಿನ ಸಮಸ್ಯೆ ಪರಿಹಾರ ಹಾಗೂ ಅಗತ್ಯವಿರುವಲ್ಲಿ ಹಿಂಬರಹದ ಮೂಲಕ ಮುಂದಿನ ಕ್ರಮಕ್ಕೆ ಚಾಲನೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ವಿಳಂಬವಿಲ್ಲದೆ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹೇಳಿದರು.