ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಸ್ತುತ 2024ರ ಲೋಕಸಭಾ ಚುನಾವಣೆ ಮಹತ್ತರ ಚುನಾವಣೆಯಾಗಿದ್ದು, ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಜನಪರ ಕೆಲಸಗಳು ಜೊತೆಗೆ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ವರಿಷ್ಠರಾದ ರಾಹುಲ್ ಗಾಂಧಿ ಸಹಿ ಮಾಡಿದ 5 ಗ್ಯಾರಂಟಿಗಳ ಬಗ್ಗೆ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.ಅವರು ಭಾನುವಾರ ಸಂಜೆ ತಾಲೂಕಿನ ಸಾಸ್ವೇಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾಮಲ್ಲಿಕಾರ್ಜುನ್ ಪರವಾಗಿ ಮತಯಾಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಸಾಕಷ್ಟು ಅನುಭವ, ವಿದ್ಯೆ ,ಜನಪರ ಕಾಳಜಿವುಳ್ಳ ಅಭ್ಯರ್ಥಿಯಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಪಕ್ಷ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಚುನಾವಣೆ ನಿಲ್ಲಿಸಿದೆ, ಮುಖಂಡರು ಕಾರ್ಯಕರ್ತರು ಸರ್ಕಾರದ ಸಾಧನೆ ಮತ್ತು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪ್ರತಿಯೊಬ್ಬ ಮತದಾರನಿಗೂ ಮನಮುಟ್ಟುವಂತೆ ತಿಳಿಸಿ, ಮತ ಹಾಕಿಸಬೇಕು ಎಂದು ಹೇಳಿದರು.ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಸಹಿ ಮಾಡಿದ 5 ಗ್ಯಾರಂಟಿ ಕಾರ್ಡ್ ಜನತೆಗೆ ನೀಡಿದ್ದು, ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಐದೂ ಗ್ಯಾರಂಟಿ ಜಾರಿಗೆ ತಂದು ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಬಿಜೆಪಿಯವರು ಕೇವಲ ಗ್ಯಾರಂಟಿ ಎಂದು ಹೇಳುತ್ತಾರೆಯೇ ಹೂರತು ಯಾವ ಗ್ಯಾರಂಟಿ ಎಂದು ಅವರಿಗೇ ಇನ್ನೂ ತಿಳಿದಿಲ್ಲ ಎಂದು ಹೇಳಿದರು.
ಜನರಿಗೆ ಬಹುಮುಖ್ಯವಾಗಿ ಹೊಟ್ಟೆಗೆ ಹಿಟ್ಟು, ಇರಲು ಒಂದು ಸೂರು, ಆರೋಗ್ಯ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಉದ್ಯೋಗ ಬೇಕಾಗಿದ್ದು, ಈ ಎಲ್ಲಾ ಅಗತ್ಯ ತಪ್ಪದೇ ಈಡೇರಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು, ಈ ನಿಟ್ಟಿನಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹೇಳಿದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ 5 ಗ್ಯಾರಂಟಿ ಜಾರಿಗೆ ತಂದು ಜನರಿಗೆ ಮುಟ್ಟಿಸಿದೆ ರಾಜ್ಯದಲ್ಲಿ ಇವುಗಳ ಉಪಯೋಗ ಪಡೆಯುವ ಪ್ರತಿಯೊಬ್ಬ ಫಲಾನುಭವಿಗಳು ಈ ಬಾರಿ ಲೋಕಸಭಾ ಚುನಾುವಣೆಯಲ್ಲಿ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ಗೆ ಮತ ಹಾಕಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಡಳಿತದ ಕಾಲದಲ್ಲಿ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್‌ರ ಅತ್ಯುತ್ತಮ ಆಡಳಿದಿಂದ ರಾಷ್ಟ್ರವನ್ನು ಪ್ರಗತಿ ಪಥದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ.ಗದ್ದಿಗೇಶ್, ಡಾ.ಡಿ.ಬಿ.ಗಂಗಪ್ಪ, ಜಿಪಂ ಮಾಜಿ ಸದಸ್ಯ ಚಂದ್ರಶೇಖರಪ್ಪ, ಎಸ್.ಎಸ್. ಕೃಷ್ಣಮೂರ್ತಿ ಆರ್.ನಾಗಪ್ಪ ಮುಂತಾದವರು ಮಾತನಾಡಿದರು.
ಸಣ್ಣಕ್ಕಿ ಬಸವಗೌಡ, ಎಚ್.ಬಿ. ಶಿವಯೋಗಿ, ಎಚ್.ಎ.ಉಮಾಪತಿ, ನ್ಯಾಮತಿ ವಾಗೀಶ್, ಮಹಿಳಾ ಮುಖಂಡೆ ಪುಪ್ಪರವೀಶ್, ಸುಲೇಮಾನ್,ಬಿ.ಜಿ. ಬಸವರಾಜಪ್ಪ, ಜಬ್ಬಾರ್ ಖಾನ್, ಮಧು ಗೌಡ, ಪ್ರದೀಪ್ ಗೌಡ, ಸೇರಿ ಸಾಸ್ವೇಹಳ್ಳಿಯ ಅನೇಕ ಮುಖಂಡರು ಇದ್ದರು.