ಗ್ಯಾರಂಟಿಯಾದ ಹೆಚ್ಚುವರಿ ಮನೆಗಳ ಭಾಗ್ಯ!

| Published : Jun 19 2024, 01:05 AM IST

ಸಾರಾಂಶ

ಸ್ವಂತ ಸೂರು ಹೊಂದಬೇಕೆನ್ನುವ ಗ್ರಾಮೀಣ ಬಡಜನರ ಬಯಕೆ ಈಡೇರುವ ಕಾಲ ಇದೀಗ ಸನ್ನಿಹಿತವಾಗಿದೆ. ಅನೇಕ ವರ್ಷಗಳಿಂದ ಹೊಸ ಮನೆಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರ ಮನೆ ಭಾಗ್ಯ ಕರುಣಿಸಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸ್ವಂತ ಸೂರು ಹೊಂದಬೇಕೆನ್ನುವ ಗ್ರಾಮೀಣ ಬಡಜನರ ಬಯಕೆ ಈಡೇರುವ ಕಾಲ ಇದೀಗ ಸನ್ನಿಹಿತವಾಗಿದೆ. ಅನೇಕ ವರ್ಷಗಳಿಂದ ಹೊಸ ಮನೆಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರ ಮನೆ ಭಾಗ್ಯ ಕರುಣಿಸಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಮತ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 400 ಹೊಸ ಮನೆಗಳನ್ನು ನಿರ್ಮಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ತನ್ಮೂಲಕ ರಾಜ್ಯ ಸರ್ಕಾರ ಆಡಳಿತರೂಢ ಪಕ್ಷದ ಸಚಿವರ ಕೈಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಆದರೆ, ತಾಲೂಕಿನ ಮತ್ತೊಂದು ಕ್ಷೇತ್ರವಾದ ಹುಕ್ಕೇರಿಗೆ ಒಂದೇ ಒಂದು ಹೆಚ್ಚುವರಿ ಮನೆ ಹಂಚಿಕೆಯಾಗದಿರುವುದು ಈ ಭಾಗದ ಬಡವರಲ್ಲಿ ನಿರಾಸೆ ಮೂಡಿಸಿದೆ.ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಸಚಿವ ಸತೀಶ ಜಾರಕಿಹೊಳಿ ಸಫಲರಾಗಿದ್ದು, ಬಡವರ ಬಾಳಿಗೆ ಆಸರೆಯಾಗಿ ಕಾಣುತ್ತಿದ್ದಾರೆ. ಇದೀಗ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿರುವುದು ಬಡವರಲ್ಲಿ ಸಹಜವಾಗಿ ಸಂಭ್ರಮ ಮನೆ ಮಾಡಿದೆ. ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಬಡವರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದು ಈ ಭಾಗದಲ್ಲಿ ಹರ್ಷದ ಹೊನಲು ಹರಿದಿದೆ.ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೂ ಆದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಐತಿಹಾಸಿಕ ದಿಗ್ವಿಜಯ ಬೆನ್ನಲ್ಲೇ ರಾಜ್ಯ ಸರ್ಕಾರ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಮನೆ ಮಂಜೂರು ಮಾಡುವ ಮೂಲಕ ಪ್ರತಿಫಲ ನೀಡಲಾಗಿದೆ ಎಂಬ ವಿಶ್ಲೇಷಣೆಗಳಿವೆ.ಯಮಕನಮರಡಿ ವಿಧಾನಸಭಾ ಕ್ಷೇತ್ರಕ್ಕೆ 2022-23ನೇ ಸಾಲಿನ ಬಸವ ವಸತಿ ಯೋಜನೆಯಡಿ 303 ಮತ್ತು ಡಾ.ಅಂಬೇಡ್ಕರ್ ನಿವಾಸ ಯೋಜನೆ(ಗ್ರಾಮೀಣ)ಯಡಿ 97 ಸೇರಿ ಒಟ್ಟು 400 ಹೆಚ್ಚುವರಿ ಮನೆಗಳನ್ನು ಮರುಹಂಚಿಕೆ ಮಾಡಿ ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ 20 ಮತ್ತು ಬೆಳಗಾವಿ ತಾಲೂಕಿನ 14 ಗ್ರಾಮ ಪಂಚಾಯತಿಗಳಿಗೆ ವರ್ಗವಾರು ಈ ಮನೆಗಳನ್ನು ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ರಾಜೀವ ಗಾಂಧಿ ವಸತಿ ನಿಗಮ ಆದೇಶಿಸಿದೆ.ಜನಸಂಖ್ಯೆ ಮತ್ತು ಸದಸ್ಯರ ಅನುಗುಣವಾಗಿ ಗ್ರಾಪಂಗಳಿಗೆ ಈ ಮನೆಗಳನ್ನು ಹಂಚಿಕೆ ಮಾಡಲು ನಿರ್ದೇಶಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಫಲಾನುಭಗಳನ್ನು ಆಯ್ಕೆ ಮಾಡುವ ಅಂತಿಮ ಗಡುವು ನೀಡಲಾಗಿದೆ. ಮನೆಗಳ ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಗ್ರಾಮಸಭೆಯ ಮೂಲಕ ಆಯ್ಕೆಗೊಳಿಸಬೇಕು.ಫಲಾನುಭವಿಗಳು ಹೆಚ್ಚಿದ್ದಲ್ಲಿ ಲಾಟರಿ ಎತ್ತುವ ಮೂಲಕ ವಿಡಿಯೋ ಚಿತ್ರಿಕರಣ ದಾಖಲಿಸುವುದು. ಅನರ್ಹ ಫಲಾನುಭವಿಗಳು ಆಯ್ಕೆಯಾಗಿದ್ದು ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಎಚ್ಚರಿಸಿದ್ದಾರೆ.ಯಮಕನಮರಡಿ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದೀಗ ಬಸವ ವಸತಿ ಮತ್ತು ಅಂಬೇಡ್ಕರ್‌ ನಿವಾಸ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯ 34 ಗ್ರಾಪಂಗಳಿಗೆ 400 ಹೆಚ್ಚುವರಿ ಮನೆಗಳನ್ನು ಮಂಜೂರಾತಿ ಮಾಡಿದ್ದು ಬಡವರು, ವಸತಿರಹಿತರಿಗೆ ವರದಾನವಾಗಿದೆ. ಕೂಡಲೇ ಅರ್ಹ ಫಲಾನುಭವಿಗಳನ್ನು ಅಂತಿಮಗೊಳಿಸಲಾಗುವುದು.

-ಸತೀಶ ಜಾರಕಿಹೊಳಿ,

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.

----------

ಬಡಜನರಿಗೆ ಸ್ವಂತ ಸೂರು ಕಲ್ಪಿಸುವ ದಿಸೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಯಮಕನಮರಡಿ ಕ್ಷೇತ್ರಕ್ಕೆ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು ಅಭಿನಂದನಾರ್ಹ. ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಲ್ಲಿ ಯೋಗ್ಯ ಫಲಾನುಭವಿಗಳನ್ನು ಆಯ್ಕೆಗೊಳಿಸುವ ಮೂಲಕ ಬಡವರ ಬಹುದಿನಗಳ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

-ಕಿರಣ ರಜಪೂತ, ಯುವ ಮುಖಂಡರು.