ಸಾರಾಂಶ
ಕುಷ್ಟಗಿ ರಸ್ತೆಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ನಾಮಕರಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳನಾನಾ ಕಾರಣಗಳಿಂದ ನಿಗದಿಯಾಗಿದ್ದ ಕಾರ್ಯಕ್ರಮ ಮುಂದೂಡಲಾಗಿದೆ. ಆದರೆ, ಕುಷ್ಟಗಿ ಮೇಲ್ಸೇತುವೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಿಯೇ ಮಾಡುತ್ತೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಕುಷ್ಟಗಿ ರಸ್ತೆಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ನಾಮಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುಷ್ಟಗಿ ಮೇಲ್ಸೇತುವೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಲು ನಿರ್ಧಾರವಾಗಿದ್ದು, ಕೊನೆಗಳಿಗೆಯಲ್ಲಿ ರದ್ದಾಗಿದೆ. ಆದರೆ, ಮುಂದೆಯಾದರೂ ನಾಮಕರಣ ಮಾಡಿಯೇ ಮಾಡುತ್ತೇವೆ. ಈಗ ಸದ್ಯ ಕುಷ್ಟಗಿ ರಸ್ತೆಗೆ ನಗರಸಭೆಯ ಠರಾವಿನಂತೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಿದ್ದು ಸಂತೋಷವಾಗಿದೆ ಎಂದರು.
ಜಾತ್ರೆಯ ಹಿನ್ನೆಲೆ ಆದಷ್ಟು ಬೇಗನೆ ಉದ್ಘಾಟಿಸಲು ಮುಂದಾದೆವು. ಆದರೆ, ಶಿಷ್ಟಾಚಾರ ಪಾಲನೆಯಲ್ಲಾದ ಸಮಸ್ಯೆಯಿಂದ ಮುಂದೂಡಲಾಗಿದೆ ಎಂದರು. ಇನ್ನು ಬಹಳಷ್ಟು ಕೆಲಸ ಆಗಿಬೇಕಾಗಿರುವುದರಿಂದ ವಿವಾದ ಮಾಡಿಕೊಳ್ಳುವುದು ಸರಿಯಲ್ಲ ಎಂದು ಸಂಗಣ್ಣ ಕರಡಿಯವರು ಹೇಳಿದ್ದರಿಂದ ಸದ್ಯಕ್ಕೆ ಕೈಬಿಟ್ಟಿದ್ದೇವೆ ಎಂದರು. ಕಿಡದಾಳ ರಸ್ತೆಗೂ ಸೇತುವೆ ನಿರ್ಮಾಣ ಮಾಡುತ್ತೇವೆ. ಕೆಇಬಿ ರಸ್ತೆಗೂ ಮಾಡುತ್ತೇವೆ. ವಿಮಾನ ನಿಲ್ದಾಣ ಮಾಡಿಯೇ ಮಾಡುತ್ತೇವೆ. ಇದಕ್ಕಾಗಿ ೪೬೮ ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳದ ಇತಿಹಾಸದಲ್ಲಿಯೇ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ನು ಕುಷ್ಟಗಿ ರಸ್ತೆಗೆ ನಾಮಕರಣ ಮಾಡಿರುವುದು ಖುಷಿಯಾಗಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಅನೇಕರು ನನ್ನ ಹೆಸರನ್ನು ರೈಲ್ವೆ ಸೇತುವೆಗೆ ಇಡುವ ಕುರಿತು ಪ್ರಸ್ತಾಪ ಮಾಡಿದರು. ಆದರೆ, ನಾನು ಇದನ್ನು ನಿರಾಕರಿಸಿದೆ. ಹೆಸರಿಗಾಗಿ ನಾನು ಎಂದು ಕೆಲಸ ಮಾಡಿಲ್ಲ. ಅದಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ಇಡುವಂತೆ ಹೇಳಿದೆ. ಆದರೆ, ಅದಕ್ಕೆ ಶಿಷ್ಟಾಚಾರ ಪಾಲನೆಯ ಸಮಸ್ಯೆಯಾಗಿದ್ದರಿಂದ ಕೈಬಿಡಲಾಯಿತು. ಕೇವಲ ರಸ್ತೆಗೆ ನಾಮಕರಣ ಮಾಡುವ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಅಷ್ಟಕ್ಕೂ ನಾನು ಈಗ ಸಾಮಾನ್ಯನಾಗಿದ್ದೇನೆ. ನನಗೆ ಯಾವ ಅಧಿಕಾರವೂ ಇಲ್ಲ. ಅಧಿಕಾರದಲ್ಲಿದ್ದವರು ತೀರ್ಮಾನ ಮಾಡಬೇಕಾಗುತ್ತದೆ ಎಂದು ನಾನು ಕೇಂದ್ರ ಸಚಿವ ಸೋಮಣ್ಣ ಅವರ ಗಮನಕ್ಕೆ ತಂದಿದ್ದೇನೆ. ಸದ್ಯಕ್ಕೆ ಆ ಕಾರ್ಯಕ್ರಮ ಕೈಬಿಡಲಾಗಿದೆ ಎಂದರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕೃಷ್ಣಾರಡ್ಡಿ ಗಲಬಿ ಸ್ವಾಗತಿಸಿದರು.ಎಸ್.ಬಿ. ನಾಗರಳ್ಳಿ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಿಗೇರಿ, ಸೋಮನಗೌಡ ಪಾಟೀಲ, ಲತಾ ಗವಿ ಸಿದ್ದಪ್ಪ ಚಿನ್ನೂರು, ರಾಜಶೇಖರ ಆಡೂರು, ಕೃಷ್ಣ ಇಟ್ಟಂಗಿ, ಅಜೀಮ ಅತ್ತಾರ, ತೋಟಪ್ಪ ಕಾಮನವರು, ರಾಮಣ್ಣ ಕಲ್ಲಣ್ಣವರ, ಅಮರೇಶ ಕರಡಿ, ಕರಿಯಪ್ಪ ಮೇಟಿ ಇದ್ದರು.ಕುಷ್ಟಗಿ ಮೇಲ್ಸೇತುವೆ ಉದ್ಘಾಟನೆಗಾಗಿ ಹೈಡ್ರಾಮಾ:
ಕುಷ್ಟಗಿ ರೈಲ್ವೆ ಸೇತುವೆ ಉದ್ಘಾಟನೆ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ವಿಷಯದ ಕುರಿತು ಸೋಮವಾರ ತಡರಾತ್ರಿಯಲ್ಲಿ ಹೈಡ್ರಾಮಾ ನಡೆದು, ಕೊನೆಗಳಿಗೆಯಲ್ಲಿ ರದ್ದಾಗಿದೆ. ಹೀಗಾಗಿ, ನಿಗದಿತ ಕಾರ್ಯಕ್ರಮವನ್ನೇ ಬದಲಾಯಿಸಿ, ಕುಷ್ಟಗಿ ರಸ್ತೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕುಷ್ಟಗಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲು ಸಂಸದ ರಾಜಶೇಖರ ಹಿಟ್ನಾಳ ಮುಂದಾಗಿದ್ದರು. ರೈಲ್ವೆ ಇಲಾಖೆಯ ಸಹಮತ ಪಡೆಯದೇ ಕಾರ್ಯಕ್ರಮ ನಿಗದಿ ಮಾಡಲಾಯಿತು. ಇದು ತಡರಾತ್ರಿ ಖುದ್ದು ರೈಲ್ವೆ ಸಚಿವರೇ ಮಧ್ಯೆ ಪ್ರವೇಶ ಮಾಡಿ, ಕಾರ್ಯಕ್ರಮ ಮುಂದೂಡಿ, ಮುಂದಿನ ದಿನಗಳಲ್ಲಿ ನಾನೇ ಆಗಮಿಸಿ, ಉದ್ಘಾಟಿಸುತ್ತೇನೆ ಎಂದಿದ್ದರಿಂದ ನಿಗದಿತ ಕಾರ್ಯಕ್ರಮ ರದ್ದಾಯಿತು. ಹೀಗಾಗಿ, ತಡರಾತ್ರಿಯಲ್ಲಿ ರೈಲ್ವೆ ಇಲಾಖೆ ಕುಷ್ಟಗಿ ರೈಲ್ವೆ ಸೇತುವೆಯನ್ನು ಸಂಚಾರ ಬ್ಯಾರಿಕೇಡ್ ಹಾಕಿ, ರೈಲ್ವೆ ಪೊಲೀಸ್ ರನ್ನು ಹಾಕಿ, ಬಂದ್ ಮಾಡಿಸಿದರು. ಇದು ಭಾರಿ ಹೈಡ್ರಾಮಾಗೆ ಸಾಕ್ಷಿಯಾಯಿತು. ತಕ್ಷಣ ರೈಲ್ವೆ ಸೇತುವೆ ಉದ್ಘಾಟನೆಯನ್ನೇ ಕೈಬಿಡಲಾಯಿತು.