ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸರ್ವೋದಯ ದಿನಾಚರಣೆ’ಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರುಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಿದರೆ ಅವರನ್ನು ಜನರು ಮರೆಯುವುದಿಲ್ಲ. ಜನರ ಮನಸ್ಸಿನಲ್ಲಿ ಅವರು ಅಮರವಾಗಿರುತ್ತಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಸ್ತೂರಿಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ‘ಸರ್ವೋದಯ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.ದೇಶದ ಜನರ ಹೃದಯದಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರು ನೆಲೆಸಿದೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿದರೆ ಜನರು ಗಾಂಧೀಜಿಯವರನ್ನು ಮರೆಯುತ್ತಾರೆ ಎಂದು ಭಾವಿಸುವುದು ಸರಿಯಲ್ಲ. ಗಾಂಧೀಜಿಯವರ ಹೆಸರು ಅಜರಾಮರವಾಗಿರಲಿದೆ ಎಂದರು.ಗಾಂಧೀಜಿಯವರ ಮೇಲಿನ ಅಭಿಮಾನ, ಅವರ ತತ್ವ, ಆದರ್ಶಗಳನ್ನು ಮೆಚ್ಚಿ ಬಹಳಷ್ಟು ಜನರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಿದ್ದಾರೆ. ನನ್ನ ಹೆಸರಿನಲ್ಲೂ ಗಾಂಧೀಜಿ ಇದ್ದಾರೆ. ಆಳುವ ಸರ್ಕಾರಗಳು ಯೋಜನೆಯ ಹೆಸರು ಮಾತ್ರ ಬದಲಿಸಬಹುದು. ಆದರೆ ಗಾಂಧೀಜಿಯವರ ಹೆಸರನ್ನು ಜನಮಾನಸದಿಂದ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.ನಮ್ಮ ಕುಟುಂಬದವರು ಪ್ರತಿ ದಿನ ಹಿಡಿ ಧಾನ್ಯವನ್ನು ತೆಗೆದಿಡುತ್ತಿದ್ದು ಅದನ್ನು ಬಳಸಿ ಸರ್ವೋದಯ ದಿನ ಆಚರಿಸುತ್ತಿದ್ದರು. ನಾನು ಈಗಲೂ ಪ್ರತಿ ದಿವಸ 10 ರು. ತೆಗೆದಿಡುತ್ತಿದ್ದು ಒಂದು ವರ್ಷದ ಆ ನಿಧಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ನೀಡುತ್ತಿದ್ದೇನೆ. ನೀವೂ ಈ ರೀತಿ ಪ್ರತಿ ದಿನ 1 ರು. ತೆಗೆದಿಟ್ಟರೆ ಸರ್ಕಾರದಿಂದ ಅನುದಾನ ಕೇಳುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ವಾರ್ತಾ ಇಲಾಖೆ ಮಾಜಿ ನಿರ್ದೇಶಕ ವಿಶುಕುಮಾರ್, ಹಿರಿಯ ಚಿತ್ರ ಕಲಾವಿದ ಬಿ.ಜಿ.ಗುಜ್ಜಾರಪ್ಪ, ಪತ್ರಕರ್ತೆ ರಶ್ಮಿ, ಆಕಾಶವಾಣಿ ಉದ್ಘೋಷಕಿ ಬಿ.ಕೆ.ಸುಮತಿ ಮತ್ತಿತರರು ಹಾಜರಿದ್ದರು.