ಸಾರಾಂಶ
ಹಾನಗಲ್ಲ: ಖೊಟ್ಟಿ ಯೋಜನೆಗಳೆಂದು ಅಪಪ್ರಚಾರ ಮಾಡುವವರು ಸಾಲಿನಲ್ಲಿ ಮೊದಲೇ ನಿಂತು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಖೊಟ್ಟಿ ಅಲ್ಲ, ನಾವು ಹೇಳಿದಂತೆ ಮಾಡಿದ ಗಟ್ಟಿ ಯೋಜನೆಗಳು ಎಂದು ಶಾಸಕ ಶ್ರೀನಿವಾಸ ಮಾನೆ ಕುಟುಕಿದರು.ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ ೫ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಕ್ಕಿಆಲೂರು ಹೋಬಳಿ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ೬೧ ಸಾವಿರ ಕುಟುಂಬಗಳಿಗೆ ಈ ಯೋಜನೆಗಳ ಲಾಭ ತಲುಪಿದೆ. ಏನು ನುಡಿದಿದ್ದೆವೋ ಅದನ್ನು ಮಾಡಿದ್ದೇವೆ. ಈ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ನಿಂತಿವೆ ಎಂದು ಹೇಳುವ ಟೀಕಾಕಾರಿಗೆ ಗೊತ್ತಿಲ್ಲವೆ? ಕುಡಿಯುವ ನೀರಿಗಾಗಿ ₹೧೮೦ ಕೋಟಿ, ಗ್ರಾಮೀಣ ರಸ್ತೆ ಮತ್ತು ಇತರ ಕಾಮಗಾರಿಗಳಿಗೆ ₹೨೫೦ ಕೋಟಿ ಸೇರಿದಂತೆ ಹತ್ತು ಹಲವು ಯೋಜನಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಲೆ ಇವೆ. ಬಡ ಮಧ್ಯಮ ವರ್ಗದವರಿಗೆ ಕನಿಷ್ಠ ಆದಾಯ ಭದ್ರತೆ ನಮ್ಮ ಧ್ಯೇಯ. ಅದನ್ನು ಸಾಧಿಸಿದ್ದೇವೆ. ₹೫೮ ಸಾವಿರ ಕೋಟಿಗಳ ಗ್ಯಾರಂಟಿ ಯೋಜನೆಗಳ ಸಾಫಲ್ಯತೆ ೬೧ ಸಾವಿರ ಕುಟುಂಬಗಳಿಗೆ ತಲುಪಿಸಿದ್ದು ನಮ್ಮ ಸಾರ್ಥಕತೆ ಎಂದರು.ಯಾವುದೇ ಕಚೇರಿಗಳಲ್ಲಿ ಏಜಂಟರ ಮೂಲಕ ಫಲಾನುಭವಿಗಳಿಗೆ ದಾರಿ ತಪ್ಪಿಸುವುದಕ್ಕೆ ಅವಕಾಶ ನೀಡಿಲ್ಲ. ಈ ಯೋಜನೆಗಳಿಗಾಗಿ ಏಜೆಂಟರು ಬೇಕಾಗಿಲ್ಲ. ಅಂತಹ ದಂಧೆಗಾರರಿಗೆ ಈಗ ಕೆಲಸವಿಲ್ಲ ಎಂದರು. ಹಾನಗಲ್ಲ ತಾಲೂಕಿನಲ್ಲಿ ನಿವಾಸದ ತೊಂದರೆಯಾದವರಿಗೆ ಹಕ್ಕುಪತ್ರಗಳನ್ನು ನೀಡುವ ಕಾರ್ಯಕ್ರಮ ಶೀಘ್ರ ನಡೆಯಲಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಶಾಲೆಗಳ ಅಭವೃದ್ಧಿಯಲ್ಲಿ ಅಧಿಕಾರಿಗಳು ಕೈ ಜೋಡಿಸುತ್ತಿದ್ದಾರೆ. ಮಹಿಳೆಯರು, ಯುವಕರಿಗಾಗಿ ಕಾರ್ಖಾನೆ ಸ್ಥಾಪನೆಯ ಭರವಸೆಯನ್ನು ನೀಡಿದ್ದೇನೆ. ಅದನ್ನು ಒದಗಿಸಿ ಕೊಡುತ್ತೇನೆ. ಇದು ನನ್ನ ಸಂಕಲ್ಪ ಎಂದರು.
ಇದು ನಮ್ಮ ಜಾತ್ಯತೀತ ಸೌಹಾರ್ದ ಭಾರತ ಎಂಬ ಹೆಮ್ಮೆ ಇದೆ. ಆದರೆ ಇಲ್ಲಿ ಇನ್ನೂ ಜಾತೀಯತೆಯನ್ನು ಉಳಿಸಿಕೊಳ್ಳುವ ಹುನ್ನಾರಗಳಿವೆ. ರಾಮ ಮಂದಿರಕ್ಕೆ ರಾಷ್ಟ್ರಪತಿ ಮುರ್ಮು ಅವರಿಗೆ ಅವಕಾಶ ನೀಡಲಿಲ್ಲ. ಇದೆಂತ ಜಾತ್ಯತೀತತೆ ಎಂದು ಬಿಜೆಪಿ ನಿಲುವಿಗೆ ಕಿಡಿಕಾರಿದ ಅವರು, ಶ್ರೀರಾಮ ಆದಿವಾಸಿ ಮಹಿಳೆ ಶಬರಿಯ ಕಡಿದಿಟ್ಟ ಹಣ್ಣು ಸವಿದು ಸುಖ ಪಟ್ಟ ಕಥೆ ಇದೆ. ಆದರೆ ಈಗ ಜಾತಿ ಹಾಗೂ ಇತರ ಹೆಸರಿನಲ್ಲಿ ಕೆಲವರನ್ನು ದೂರಿಡುವ ಯತ್ನ ಸರಿಯಲ್ಲ ಎಂದು ಹೇಳಿದರು.ತಹಸೀಲ್ದಾರ್ ಎಸ್. ರೇಣುಕಾ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಮಾವೇಶದ ಮುಖ್ಯ ಉದ್ದೇಶ. ಇದು ಮಹಿಳಾ ಸಬಲೀಕರಣ ಕೇಂದ್ರಿತ ಯೋಜನೆ, ಮೂಲಭೂತ ಸೌಕರ್ಯ ನೀಡುವ ಉದ್ದೇಶ ಇಲ್ಲಿದೆ. ಈ ೫ ಯೋಜನೆಗಳ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಶಕ್ತಿ ಯೋಜನೆ ಕುರಿತು ರಚನಾ ಹರಿಜನ, ಗೃಹಲಕ್ಷ್ಮೀ ಯೋಜನೆ ಕುರಿತು ಸಿದ್ದಮ್ಮ ಹೊಂಕಣ, ಗೃಹಲಕ್ಷ್ಮೀ ಯೋಜನೆ ಕುರಿತು ಮಾಬುಸಾಬ ಹಿತ್ತಲಮನಿ, ಅನ್ನಭಾಗ್ಯ ಯೋಜನೆ ಕುರಿತು ರಜಿಯಾಬೇಗಂ ಹಿತ್ತಲಮನಿ, ಯುವನಿಧಿ ಯೋಜನೆ ಕುರಿತು ಪೂಜಾ ಟೋಪೋಜಿ ಮಾತನಾಡಿದರು.ನೃತ್ಯ, ಜನಪದ ಹಾಡು, ದೇಶಭಕ್ತಿ ಹಾಡುಗಳೊಂದಿಗೆ ಕಾರ್ಯಕ್ರಮ ನಡೆಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))