ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗುವುದಿಲ್ಲ: ಪೊನ್ನಣ್ಣ ಸ್ಪಷ್ಟನೆ

| Published : Jun 13 2024, 12:55 AM IST / Updated: Jun 13 2024, 01:20 PM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳು ಸೋಲಿನ ಹಾತಶೆಯಿಂದ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ನೀಡಿರುವ ಗ್ಯಾರಂಟಿಗಳು ಎಂದಿಗೂ ಸ್ಥಗಿತವಾಗುವುದಿಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ.

  ವಿರಾಜಪೇಟೆ :  ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳು ಸೋಲಿನ ಹಾತಶೆಯಿಂದ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ನೀಡಿರುವ ಗ್ಯಾರಂಟಿಗಳು ಎಂದಿಗೂ ಸ್ಥಗಿತವಾಗುವುದಿಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ವಿರಾಜಪೇಟೆ ನಗರ ಹಾಗು ಗ್ರಾಮಾಂತರ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸಶಕ್ತ ವಿರೋಧ ಪಕ್ಷ ಇರಲಿಲ್ಲ. ಆದರೆ, ಇದೀಗ ಬಲಿಷ್ಠ ಇಂಡಿಯಾ ಮೈತ್ರಿ ಕೂಟ ವಿರೋಧ ಪಕ್ಷವಾಗಿ ಉದಯವಾಗಿದೆ. ಇದರಿಂದ ಸಮಾನಂತರವಾದ ಆಡಳಿತ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಲ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೀರ್ಘಕಾಲದ ಅವಧಿಯ ಚುನಾವಣೆ ಪ್ರಕ್ರಿಯೆಗಳು ನಡೆದಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆಯಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಮತಗಳು ವಿಂಗಡಣೆಯಾಗಿದ್ದು ಸಂಘಟಿತವಾಗಿ ಮತ ಕ್ರೋಢೀಕರಣ ಮಾಡುವಲ್ಲ ವಿಫಲರಾಗಿದ್ದೇವೆ ಎಂದು ಅವರು ವಿಶ್ಲೇಷಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚಿನ ಮಹತ್ವ ಪಡೆದುಕೊಂಡು ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ಲಭ್ಯವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ರಚನೆಗೆ ಜನತೆ ವ್ಯತಿರಿಕ್ತವಾದ ಜನಾದೇಶ ನೀಡಿದ್ದಾರೆ. ಅದನ್ನು ಗೌರವದಿಂದ ರಾಜಕೀಯ ಪಕ್ಷಗಳು ಮನಗಾಣಬೇಕು ಎಂದರು.

೨೦೧೯ ರ ಚುನಾವಣೆಗಿಂತ ೨೦೨೪ ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ ಗಳಿಕೆ ಸುಮಾರು ಶೇ. ೩೩ ರಷ್ಟು ಎರಿಕೆ ಕಂಡಿರುವುದು ಸಂತೋಷದಾಯಕ ವಿಷಯವಾಗಿದೆ ಎಂದು ಹೇಳಿದರು.

ನೀತಿ ಸಂಹಿತೆ ಅಡ್ಡಿ:

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಜನಪರವಾದ ಸರ್ಕಾರಿ ಕಾಮಾಗಾರಿಗಳು ನಡೆಯುತ್ತಿದ್ದು ನೀತಿ ಸಂಹಿತೆ ಕಾರಣದಿಂದಾಗಿ ಕಾಮಗಾರಿಗಳಲ್ಲಿ ವಿಳಂಬವಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಾಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ವಿರಾಜಪೇಟೆ ನಗರದಲ್ಲಿ ವಾಹನ ಸಂಚಾರವು ದಟ್ಟವಾಗಿದ್ದು ರಸ್ತೆಯ ಅಗಲೀಕರಣದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ರಸ್ತೆ ಅಗಲಿಕರಣಕ್ಕೆ ಸಂಭಂದಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಕೇಸ್ ನೀಡಿರುವವರೋಂದಿಗೆ ಮಾತುಕತೆ ಮಾಡಲಾಗಿದೆ. ಕೆಲವರು ನಾವು ಕೇಸ್ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾನೂನು ಹೋರಾಟದಿಂದ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

ವಿರಾಜಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ ಗುತ್ತಿಗೆ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ನೀಡದಿರುವ ದೂರು ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಮಾರ್ಚ್ ತಿಂಗಳವರೆಗೆ ವೇತನ ನೀಡಲಾಗಿದೆ ಎಂದು ತಿಳಿದುಬಂದಿದೆ. ತುರ್ತು ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಾದಂಡ ತಿಮ್ಮಯ್ಯ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ಪುರಸಭೆ ಸದಸ್ಯರಾದ ದೇಚಮ್ಮ ಕಾಳಪ್ಪ, ಎಚ್.ಎಸ್. ಮತೀನ್, ರಾಜೇಶ್ ಪದ್ಮನಾಭ ಹಾಜರಿದ್ದರು.