ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ರೂಪಿಸಲ್ಪಟ್ಟಿವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳು ಸಾಮಾಜಿಕ ಬದ್ಧತೆ ಒದಗಿಸುವ ಹೂಡಿಕೆಯಾಗಿವೆ. ಎಲ್ಲರಿಗೂ ‘ಸಮಪಾಲು, ಸಮಬಾಳು’ ಎಂಬ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿವೆ. ಇದು ಕೂಡ ಅಭಿವೃದ್ದಿಯೇ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.ನಗರದ ವಿವಿಧೆಡೆ ಶನಿವಾರ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಕೈಗೊಂಡ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ. ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೆ ಸೇರಿದ ಜನರ ಏಳಿಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳು ಸಾಮಾಜಿಕ ಬದ್ಧತೆ ಒದಗಿಸುವ ಹೂಡಿಕೆಯಾಗಿವೆ. ಇದು ಕೂಡ ಅಭಿವೃದ್ದಿಯೇ. ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳು ಮಾತ್ರವಲ್ಲ. ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು ಕೂಡ ಅಭಿವೃದ್ಧಿ ಆಗಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅವರು ಸಮರ್ಥಿಸಿಕೊಂಡರು.ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ನಮ್ಮ ಗ್ಯಾರಂಟಿಗಳು ರಾಜ್ಯದ ಜನರಿಗೆ ಅನುಕೂಲ ಕಲ್ಪಿಸಿವೆ. ಶಕ್ತಿ ಯೋಜನೆ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಿದೆ. ಕಾಂಗ್ರೆಸ್ ಅನ್ನು ಟೀಕೆ ಮಾಡುವ ಬದಲು ಬಿಜೆಪಿಯವರು ತಮ್ಮ ಸಾಧನೆಗಳನ್ನು ಜನರ ಮುಂದೆ ಹೇಳಲಿ. ನನ್ನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಪ್ರಮಾಣ ಹೆಚ್ಚಿಸಿದ್ದನ್ನು ಬಿಜೆಪಿ ಸರ್ಕಾರ ಕಡಿತ ಮಾಡಿತು. ಆಹಾರ ಭದ್ರತಾ ಕಾಯ್ದೆ, ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಜಾರಿಗೆ ತಂದಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಂದು ಅವರು ಪ್ರತಿಪಾದಿಸಿದರು.ನಾವು ಕೇಂದ್ರ ಸರ್ಕಾರಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ:
ಸಿದ್ದರಾಮಯ್ಯ ಸಾಲ ಮಾಡಿದ್ದಾರೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯನ್ನು ಬಿಜೆಪಿ ಸರಿಯಾಗಿ ಓದಿಕೊಳ್ಳಬೇಕು. ಯಾವುದೇ ರಾಜ್ಯ ಸಿಕ್ಕಾಪಟ್ಟೆ ಸಾಲ ಮಾಡಲು ಸಾಧ್ಯವಿಲ್ಲ. ಇಷ್ಟೇ ಸಾಲ ಕೂಡಬೇಕೆಂದು ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ನಿಗದಿ ಮಾಡುತ್ತದೆ. ನಾವು ಕೇಂದ್ರ ಸರ್ಕಾರಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಕೇಂದ್ರದ ಜಿಡಿಪಿ ಶೇ.7.14ರ ಬೆಳವಣಿಗೆ ಇದ್ದರೆ, ಕರ್ನಾಟಕದ ಜಿಡಿಪಿ ಶೇ.8.1ರಷ್ಟಿದೆ. ಇವೆರಡರಲ್ಲಿ ಯಾವುದು ಅಧಿಕ? ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಜಿಡಿಪಿ ಬೆಳವಣಿಗೆ ಕೇಂದ್ರ ಸರ್ಕಾರಕ್ಕಿಂತ ಉತ್ತಮವಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ₹53.11 ಲಕ್ಷ ಕೋಟಿ ಸಾಲ ಇತ್ತು. ಈಗ 2026ರ ಮಾರ್ಚ್‌ವರೆಗೆ ₹218 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 12 ವರ್ಷಗಳಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ನಮ್ಮ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದೆ. ಇದುವರೆಗೆ ₹1.31 ಲಕ್ಷ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ವ್ಯಯಿಸಲಾಗಿದೆ ಎಂದು ಅವರು ಹೇಳಿದರು.ಸಮಪಾಲು, ಸಮಬಾಳು ಎನ್ನುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರದಿಂದ ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಯತ್ನಾಳ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ, ಹೀನಾಯ ಸ್ಥಿತಿಗೆ ತಲುಪಿದೆ. ಬಿಜೆಪಿಯವರು ಸೋಲಿನ ಭಯದಿಂದ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದರು.ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ:
ದೇಶದಲ್ಲಿ ರೈತರಿಗೆ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ಮಲ ಹೊರುವ ಪದ್ದತಿ ನಿಷೇಧ, ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಭರವಸೆ ನೀಡಿದಂತೆ ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ದೇಶದಲ್ಲಿಂದು ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ನಮ್ಮ ಸರಕಾರ ಯುವನಿಧಿ ಯೋಜನೆ ಜಾರಿ ಮಾಡಿದೆ. ಇದನ್ನು ಬಿಜೆಪಿ ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.