ಗ್ಯಾರಂಟಿಗಳಿಂದ ಫಲಾನುಭವಿಗಳ ಬಾಳಲ್ಲಿ ಬೆಳಕು

| Published : Nov 02 2025, 04:15 AM IST

ಗ್ಯಾರಂಟಿಗಳಿಂದ ಫಲಾನುಭವಿಗಳ ಬಾಳಲ್ಲಿ ಬೆಳಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ₹ 7,824 ಲಕ್ಷ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಿದ 2,607 ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ₹ 16,000 ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ₹ 7,824 ಲಕ್ಷ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಿದ 2,607 ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ₹ 16,000 ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶಾದ್ಯಂತ ಸಂಚಲನ ಸೃಷ್ಠಿಸಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ಬೆಳಕು ಮತ್ತು ಭರವಸೆ ತುಂಬುವಲ್ಲಿ ಸಫಲವಾಗಿವೆ ಎಂದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 5,99,322 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಈ ಪೈಕಿ 21,10,591 ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 15.98 ಕೋಟಿ ಲಕ್ಷ ಮಹಿಳಾ ಪ್ರಯಾಣಿಕರು ಹಾಗೂ ಬಾಲಿಕೆಯರು ವಿಜಯಪುರ ವಿಭಾಗದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪ್ರಯಾಣಕ್ಕೆ ಒಟ್ಟ್ಟು ₹ 502 ಕೋಟಿ ಮೌಲ್ಯದ ಉಚಿತ ಟಿಕೆಟ್‌ ವಿತರಣೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆ ಒಟ್ಟು 5,18,398 ಫಲಾನುಭವಿಗಳು ನೋಂದಣಿಯಾಗಿದ್ದು,₹1,983 ಕೋಟಿ ಅನುದಾನ ಖರ್ಚು ಭರಿಸಿದೆ. ಶೇ.99.51 ರಷ್ಟು ಪ್ರಗತಿಯಾಗಿದೆ. ಗೃಹಜ್ಯೋತಿ ಯೋಜನೆ ಒಟ್ಟು 4,55,780 ಗ್ರಾಹಕರು ಅಂದರೆ ಶೇ.97 ರಷ್ಟು ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೆ ಗ್ರಾಹಕರಿಗೆ ₹ 485 ಕೋಟಿ ಮೊತ್ತದ ಉಚಿತ ವಿದ್ಯುತ್‌ ಪೂರೈಸಲಾಗಿದೆ. ಯುವನಿಧಿ ಯೋಜನೆಯಡಿ ಇಲ್ಲಿವರೆಗೆ ಒಟ್ಟು 20,060 ಅಭ್ಯರ್ಥಿಗಳು ನೋಂದಣಿಯಾಗಿದ್ದು ಇದರಲ್ಲಿ 14,330 ಅರ್ಹ ಫಲಾನುಭವಿಗಳಿಗೆ ಒಟ್ಟು ₹ 35. 7 ಕೋಟಿ ಮೊತ್ತದ ನಿರುದ್ಯೋಗ ಭತ್ಯೆ ಜಮೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, ಪರಿಹಾರ ವಿತರಣಾ ಕ್ರಮ ಜಾರಿಯಲ್ಲಿದೆ. ತಾಲೂಕಿನ ಬುರಣಾಪೂರ ಮತ್ತು ಮದಭಾವಿ ಗ್ರಾಮ ವ್ಯಾಪ್ತಿ ಪ್ರದೇಶದಲ್ಲಿ ₹ 348 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣ ಕಾಮಗಾರಿಯು ಸಂಪೂರ್ಣಗೊಂಡಿದೆ. ಅತೀ ಅಗತ್ಯ ಅಗ್ನಿ ಶಾಮಕ ಯಂತ್ರಗಳು ವಿದೇಶದಿಂದ ಈಗಾಗಲೇ ಬಂದಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಸಾಧಕರನ್ನು ಸನ್ಮಾನಿಸಲಾಯಿತು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಆಕರ್ಷಕ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕಧೋಂಡ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮೇಯರ್‌ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಪ್, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.