ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಮಟ್ಟ ಚೇತರಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ನರಗುಂದ
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಮಟ್ಟ ಚೇತರಿಕೆಯಾಗಿದೆ ಎಂದು ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ ಹೇಳಿದರು.ತಾಲೂಕಿನ ಬೆನಕನಕೊಪ್ಪ ಗ್ರಾಪಂಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಮ್ಮ ಸರ್ಕಾರವು ಜನರಿಗೆ ನೀಡಿದ ಚುನಾವಣಾ ಪೂರ್ವ ಭರವಸೆಯಂತೆ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರತಿ ಕುಟುಂಬದ ಆರ್ಥಿಕ ಚೇತರಿಕೆಗೆ ಬೆನ್ನೆಲುಬಾಗಿದೆ. ಆರ್ಥಿಕದ ಸಂಕಷ್ಟದ ನಡುವೆಯೂ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅತ್ಯುತ್ತಮವಾಗಿ ಜನರಿಗೆ ನೀಡುತ್ತಿರುವ ನಮ್ಮ ಮುಖ್ಯಮಂತ್ರಿಗಳು ಹೊಸದಾಗಿ ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿ ಯೋಜನೆಯನ್ನು ಸಹ ಜಾರಿಗೊಳಿಸುವ ಮೂಲಕ ಸರ್ಕಾರ ಸದಾಕಾಲ ಜನರೊಂದಿಗೆ ಇರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುತ್ತಾರೆ ಎಂದರು.
ತಾಪಂ ಅಧಿಕಾರಿ ಶ್ರೀಧರ ಚಿನಗುಂಡಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಗೃಹಲಕ್ಷ್ಮಿ ಯೋಜನೆಯ ಪುನರ್ ಪರಿಶೀಲನೆ ಕಾರ್ಯವು ಸಹ ತಾಲೂಕಿನಲ್ಲಿ ನಡೆಯುತ್ತಿದ್ದು, ಇದಕ್ಕೆ ನಾಗರಿಕರು ಸಹಕರಿಸಬೇಕು. ಭೂ ಗ್ಯಾರಂಟಿ ಯೋಜನೆಯಡಿ ಗ್ರಾಮದ ಎಲ್ಲ ಜನರು ತಮ್ಮ ಆಸ್ತಿಗಳಿಗೆ ಈ ಸ್ವತ್ತು ಹೊಂದುವುದು ಕಡ್ಡಾಯವಾಗಿದೆ ಅದನ್ನು ತಾವೆಲ್ಲರೂ ಪಡೆಯಬೇಕೆಂದು ಹೇಳಿದರು.ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣವರ, ಕಂದಾಯ ಇಲಾಖೆಯ ಆಹಾರ ನಿರೀಕ್ಷ ಪವಾರ, ಹೆಸ್ಕಾಂ ಅಧಿಕಾರಿ ಖುದವಂದ, ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರು ತಮ್ಮ ವ್ಯಾಪ್ತಿಯ ಯೋಜನೆಗಳ ಪ್ರಗತಿ ವಿವರಿಸಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರಾದ ದ್ಯಾಮಣ್ಣ ಕಾಡಪ್ಪನವರ, ಟಿ.ಬಿ. ಶಿರಿಯಪ್ಪಗೌಡ್ರ , ವಿನಾಯಕ ಹಡಗಲಿ, ಉಮಾ ದ್ಯಾವನೂರ, ಶೇಖರಗೌಡ ಮುದ್ನೂರ, ಬಸವರಾಜ ಹೊಂಗಲ, ಮೌಲಾಸಾಬ ಅರಬಜಮಾದಾರ, ಹನುಮಂತ ರಾಮಣ್ಣವರ, ವಿಜಯಲಕ್ಷ್ಮೀ ಹತ್ತಿಕಾಳ, ಪಿಡಿಓ ವ್ಹಿ.ಆರ್.ರಾಯನಗೌಡ್ರ, ಸಿಬ್ಬಂದಿ ಮತ್ತು ಅಂಗನವಾಡಿ, ಎನ್.ಆರ್.ಎಲ್.ಎಮ್ ಸಿಬ್ಬಂದಿ, ಗ್ರಾಮಸ್ಥರು ಇದ್ದರು.