ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಕಟ್ಟಿಕೊಳ್ಳಲು ನೆರವಾಗಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದರು.ತಾಲೂಕಿನ ಐನಾಪುರ ಪಟ್ಟಣ ಪಂಚಾಯತಿಯಲ್ಲಿ ಗುರುವಾರ 2022-23ನೇ ಸಾಲಿನ ಮುಖ್ಯಮಂತ್ರಿಗಳ ನಗರೋತ್ತಾನ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಇನ್ವರ್ಟರ್ ಮತ್ತು ಬ್ಯಾಟರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲದೆ ಯೋಜನೆಗಳು ಯಾರಿಗೂ ಸರಿಯಾಗಿ ತಲುಪುತ್ತಿಲ್ಲ ಎಂದು ವಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗೆ ಬಜಟ್‌ನಲ್ಲಿ ಅನುದಾನ ಮೀಸಲಿಟ್ಟು, ಸಂವಿಧಾನಾತ್ಮಕವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯದ ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿದೆ. ಕಾಗವಾಡ ವಿಧಾನಸಭಾ ಮತಕ್ಷೇತ್ರ ಒಂದಕ್ಕೆ ಸುಮಾರು ₹150 ಕೋಟಿ ಅನುದಾನ ತಂದಿದ್ದೇನೆ ಎಂದರು.ಚುವಾವಣೆಯ ಸಂದರ್ಭದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದಾಗ ಬಿಜೆಪಿ ಹಾಗೂ ಮಿತ್ರ ಪಕ್ಷದವರು ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ರಾಜ್ಯ ಹಾಳು ಮಾಡುತ್ತಾರೆ ಎಂದವರೇ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಮಹಾರಾಷ್ಟ್ರ, ದೇಹಲಿ ಸೇರಿ ವಿವಿಧ ರಾಜ್ಯದಲ್ಲಿ ಜಾರಿಗೊಳಿಸಿದ್ದಾರೆ. ಸಿದ್ದರಾಮಯ್ಯನವರು ಘೋಷಿಸಿದ ಪಂಚ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿವೆ ಎಂದರು. ದೇಶದಲ್ಲಿಂದು ಪೆಟ್ರೋಲ್, ಡಿಸೈಲ್, ಗ್ಯಾಸ್ ಬೆಲೆ ಏರಿಕೆಯನ್ನು ಮಾಡಿ ರಾಜ್ಯದಲ್ಲಿ ಜನಾಕ್ರೋಶ ಯಾತ್ರೆಯನ್ನು ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ದೇಶದಲ್ಲಿ ಆಡಳಿತ ಚುಕ್ಕಾಣಿ ಬಿಜೆಪಿಯವರ ಕೈಯಲ್ಲಿದೆ. ಹಾಗಾದರೆ ಪೆಟ್ರೋಲ್, ಡಿಸೈಲ್, ಗ್ಯಾಸ್ ಬೆಲೆ ಏರಿಕೆ ಕಡಿಮೆ ಮಾಡಿ ಜನಾಕ್ರೋಶ ಯಾತ್ರೆ ಮಾಡಲಿ ಎಂದರು. ಮಹಿಳೆಯರು ಸ್ವಾವಲಂಬಿ ಜೀವನ ರೂಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಲು ಸರಕಾರದಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಅದರ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಈ ವೇಳೆ ಪಪಂ ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ,ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಸನಾಳೆ, ಕುಮಾರ ಜಯಕರ, ಮುಖಂಡರಾದ ಸುರೇಶ ಗಾಣಿಗೇರ, ಡಾ.ಅರವಿಂದರಾವ್ ಕಾರ್ಚಿ, ಪ್ರಕಾಶ ಕೋರ್ಬು, ಪ್ರಕಾಶ ಗಾಣಿಗೇರ, ಸುಭಾಷ ಪಾಟೀಲ, ಚಮನರಾವ್ ಪಾಟೀಲ, ಗುರುರಾಜ ಮಡಿವಾಳರ, ಸುರೇಶ ಅಡಿಸೇರಿ, ಗೋಪಾಲ ಮಾನಗಾಂವೆ, ಸುನೀಲ ಪಾಟೀಲ, ಉಮಾಜಿ ನಡೋಣಿ, ಸದಾಶಿವ ಗಾಣಿಗೇರ, ಮಹೇಶ ಸೊಲ್ಲಾಪುರ, ಸಹದೇವ ನಾಯಿಕ, ಅನೀಲಕುಮಾರ ಸತ್ತಿ, ವಿಶ್ವನಾಥ ನಾಮದಾರ, ಸುನೀಲ ಅವಟಿ,ಧರೆಪ್ಪ ಹರಳೆ, ಸಂದೀಪ ಮಾನಗಾಂವೆ ಸೇರಿ ಅನೇಕರಿದ್ದರು. ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ ಸ್ವಾಗತಿಸಿ, ಮಹೇಶ ಸೊಲ್ಲಾಪುರ ವಂದಿಸಿದರು.