ಸಾರಾಂಶ
ಲಕ್ಷ್ಮೇಶ್ವರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಬಡವರ, ದೀನ ದಲಿತರ ಜೀವನ ಮಟ್ಟ ಸುಧಾರಿಸಲು ಸಾಕಷ್ಟು ಉಪಯುಕ್ತವಾಗಿವೆ ಎಂದು ಲಕ್ಷ್ಮೇಶ್ವರ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಗುರುವಾರ ಪಟ್ಟಣದಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳು ಪರಿಶೀಲನಾ ಸಭೆ ಹಾಗೂ ಗ್ಯಾರಂಟಿ ಸಮಿತಿಯ ನೂತನ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎನ್ನುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಯೋಜನೆಯ ಅನುಷ್ಠಾನದಲ್ಲಿ ಆಗುವ ಲೋಪ ಸರಿಪಡಿಸಿಕೊಂಡು ನೂರಕ್ಕೆ ನೂರರಷ್ಟು ಯಶಸ್ಸು ಸಾಧಿಸುವ ಮೂಲಕ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಡುವ ಕಾರ್ಯ ಮಾಡಬೇಕು. ಅಧಿಕಾರಿಗಳು ಜನರು ಬಳಿಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುವಲ್ಲಿ ಆಗಿರುವ ಸಮಸ್ಯೆ ಕಂಡು ಹಿಡಿದು ಅವರಿಗೆ ಯೋಜನೆ ಸಮರ್ಪಕವಾಗಿ ಮುಟ್ಟುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು, ಬಿಪಿಎಲ್ ಪಡಿತರ ಚೀಟಿ ಪಡೆಯಲು ಬಡವರು ಹರಸಾಹಸ ಪಡುತ್ತಿದ್ದಾರೆ. ಬಡವರಿಗೆ ಕಾರ್ಡ್‌ಗಳು ಸರಿಯಾಗಿ ಮುಟ್ಟಿಸುವ ಕಾರ್ಯವಾಗಬೇಕು. ಸ್ತ್ರೀ ಶಕ್ತಿ ಯೋಜನೆ ಮಹಿಳೆಯರಿಗೆ ಉಪಯುಕ್ತವಾಗಿದ್ದು, ಕೊಟ್ಯಂತರ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಶಕ್ತಿ ಯೋಜನೆಯಿಂದ ಶಾಲಾ ಕಾಲೇಜುಗಳಿಗೆ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ರೀತಿಯಲ್ಲಿ ಬಸ್ ಸಂಚಾರದ ರೂಟ್ ಮಾಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ತಡೆಯುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿ ಆಹಾರ ಇಲಾಖೆಯ ಜಗದೀಶ್ ಕುರುಬರ, ಸಾರಿಗೆ ಇಲಾಖೆಯ ಸವಿತಾ ಅದಿ, ಹೆಸ್ಕಾಂನ ಆಂಜನಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನ್ನಪೂರ್ಣ ಹಳ್ಳಿಗುಡಿ, ಯುವ ನಿಧಿ ಯೋಜನಾಧಿಕಾರಿ ವಿನಾಯಕ ನೀರಲಕೇರಿ ಹಾಗೂ ತಾಪಂ ಇಓ ಕೃಷ್ಣಪ್ಪ ಧರ್ಮರ ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಜಯಕ್ಕ ಕಳ್ಳಿ, ಶಶಿಕಲಾ ಬಡಿಗೇರ, ಸಿದ್ಲಿಂಗೇಶ ರಗಟಿ, ವಿನಾಯಕ ಮಡಿವಾಳರ, ರಮ್ಜಾನ್ ಸಾಬ್ ನದಾಫ್ , ರಿತ್ತಿ ಸೇರಿದಂತೆ ಅನೇಕರು ಇದ್ದರು.