ಆನೆ ಸೇರಿದಂತೆ ಹಲವು ವನ್ಯಜೀವಿಗಳು ಕಾಡಿನ ಭಾಗವೇ ಆಗಿರುವುದರಿಂದ ಪ್ರಕೃತಿ ಸಂರಕ್ಷಣೆಯಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ಆನೆ ಭೂಮಿ ಮೇಲೆ ಬಾಳುವ ಅತ್ಯಂತ ದೊಡ್ಡ ಸಸ್ತನಿ ಪ್ರಾಣಿ. ಸಸ್ಯಾಹಾರಿ ಆಗಿರುವ ಆನೆಗಳು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪೂಜನೀಯ ಸ್ಥಾನ ಹೊಂದಿದೆ.
ಕೀರ್ತನ ಕುಶಾಲನಗರ: ಆನೆ ಸೇರಿದಂತೆ ಹಲವು ವನ್ಯಜೀವಿಗಳು ಕಾಡಿನ ಭಾಗವೇ ಆಗಿರುವುದರಿಂದ ಪ್ರಕೃತಿ ಸಂರಕ್ಷಣೆಯಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ಆನೆ ಭೂಮಿ ಮೇಲೆ ಬಾಳುವ ಅತ್ಯಂತ ದೊಡ್ಡ ಸಸ್ತನಿ ಪ್ರಾಣಿ. ಸಸ್ಯಾಹಾರಿ ಆಗಿರುವ ಆನೆಗಳು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪೂಜನೀಯ ಸ್ಥಾನ ಹೊಂದಿದೆ. ಇವುಗಳ ಮುಖ್ಯ ಆಹಾರ ಹುಲ್ಲು ಎಲೆ ಮತ್ತು ಚಿಗುರು. ದಿನದಲ್ಲಿ 17 ಗಂಟೆಗಳ ಅವಧಿ ಸಮಯವನ್ನು ಆಹಾರ ಸಂಗ್ರಹಣೆಯಲ್ಲಿ ಕಳೆಯುತ್ತವೆ. ದಿನಕ್ಕೆ ಸುಮಾರು 250 ಕೆಜಿ ತನಕ ಆಹಾರ ಸೇವಿಸುತ್ತವೆ.
ಕರ್ನಾಟಕ ರಾಜ್ಯ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಬಂಡಿಪುರ ನಾಗರಹೊಳೆ ಹಾಗೂ ಇತರ ದಟ್ಟ ಕಾಡುಗಳಲ್ಲಿ ಆನೆಗಳು ಮುಕ್ತವಾಗಿ ವಾಸಿಸುತ್ತವೆ.ಯಾವುದೇ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ಅಂದರೆ ಆ ಪ್ರದೇಶದಲ್ಲಿ ಅರಣ್ಯ ಸಂಪತ್ತು ಜೀವ ವೈವಿಧ್ಯತೆ ಸಮೃದ್ಧವಾಗಿದೆ ಎಂದು ಅರ್ಥ. ವನ್ಯಜೀವಿಗಳ ಬದುಕಿಗೆ ಉತ್ತಮ ವಾತಾವರಣ ಇದ್ದಾಗ ಮಾತ್ರ ಅವುಗಳ ಸಂತತಿ ವೃದ್ಧಿಯಾಗುತ್ತದೆ. ಅರಣ್ಯದಲ್ಲಿ ಅವುಗಳ ಬದುಕಿಗೆ ಪೂರಕ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಎಲ್ಲರ ಕರ್ತವ್ಯವಾಗಿದೆ.
ಕಾಡಿನ ಸಮೃದ್ಧತೆಯಲ್ಲಿಯೂ ಇವುಗಳ ಪಾತ್ರ ಪ್ರಮುಖವಾಗಿದೆ. ಕಾಡಿನಲ್ಲಿ ಆಹಾರವನ್ನು ಅರಸಿ ಅಲೆದಾಡುತ್ತಲೇ ಇರುತ್ತವೆ. ಆ ವೇಳೆ ತಾನು ಅರಿಯದೆ ಬೀಜ ಪ್ರಸರಣ ಅಂತ ಬಹು ದೊಡ್ಡ ಕೆಲಸ ಮಾಡುವ ಆನೆಗಳು ಕಾಡಿನ ರೈತನಂತೆ ಕಾರ್ಯನಿರ್ವಹಣೆ ಮಾಡುತ್ತದೆ ಸೇವಿಸಿದ ಆಹಾರದಲ್ಲಿ ಶೇ. 45ರಷ್ಟು ಜೀರ್ಣಿಸಿ ಉಳಿದಿದ್ದನ್ನು ಲದ್ದಿ ರೂಪದಲ್ಲಿ ಹೊರಹಾಕುತ್ತದೆ. ಕಾಡಾನೆಗಳು ಮಾನವರಂತೆ ಸಂಘ ಜೀವಿ. ಅವುಗಳ ಕೌಟುಂಬಿಕ ಬದುಕು ಮಾತೃ ಪ್ರಧಾನ ವ್ಯವಸ್ತೆಯಿಂದ ಕೂಡಿದೆ. ಸದಾ ಕಾಲ ಚಲಿಸುವುದೇ ಆನೆಗಳ ವಿಶಿಷ್ಟ ಗುಣ. ರಾಜ್ಯದಲ್ಲಿ ಅಂದಾಜು ಪ್ರಕಾರ 7 ಸಾವಿರಕ್ಕೂ ಅಧಿಕ ಆನೆಗಳು ಇರುವುದು ಖಚಿತಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಆನೆ ಮಾನವ ಸಂಘರ್ಷ ಮತ್ತು ಕಾಫಿ ತೋಟಗಳ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ನೂರಾರು ಎಕರೆ ವಿಸ್ತೀರ್ಣದ ಕಾಫಿ ತೋಟಗಳನ್ನು ಹೊಂದಿರುವುದರಿಂದ ಆನೆಗಳಿಗೆ ಪ್ರಶಸ್ತವಾದ ಆವಾಸ ಸ್ಥಾನ ಒದಗಿಸಿದೆ. 2023ರ ಆನೆ ಗಣತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಆನೆಗಳು ನೆಲೆ ಕಂಡಿವೆ.ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ನಿರಂತರವಾಗಿ ಇರುತ್ತದೆ. ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಸುಮಾರು 150ಕ್ಕೂ ಅಧಿಕ ಆನೆಗಳು ವಾಸ ಮಾಡುತ್ತವೆ ಎನ್ನುವ ಮಾಹಿತಿ ಇದ್ದು, ಇವುಗಳು ಕಾಡಿಗೆ ಹೋಗದೆ ಇಲ್ಲೇ ನೆಲೆ ಕಂಡಿವೆ.
ಆನೆಗಳ ಕುಟುಂಬ ವ್ಯವಸ್ಥೆ ಅತ್ಯಂತ ಸಂಕೀರ್ಣ ಮಾನವ ಸಮಾಜದಂತೆ ಗುಂಪು ಗುಂಪುಗಳ ನಡುವೆ ಭಾವನಾತ್ಮಕ ಸಂಬಂಧ ಒಂದು ಮೂಲಕ ವಾರ್ಷಿಕವಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಲೆಯುವ ಈ ಆನೆಗಳ ಗುಂಪು ಆಹಾರಕ್ಕಾಗಿ ಅಲೆದಾಡುತ್ತ ಹೊರ ಬಂದಾಗ ಏಕಾಏಕಿ ತನ್ನ ಚಲನವಲನಕ್ಕೆ ಅಡ್ಡಿಯಾಗುವ ಮಾನವನ ಜೊತೆ ಸಂಘರ್ಷ ಮಾಡಲೇಬೇಕಾದ ಪ್ರಮೇಯ ಬರುತ್ತದೆ. ಆ ಸಂದರ್ಭ ಆನೆ ಮಾನವ ಸಂಘರ್ಷದಲ್ಲಿ ಮಾನವ ಬಲಿಯಾಗಲೇ ಬೇಕಾಗುತ್ತದೆ.ಆನೆ ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಸರ್ಕಾರ ಹೊಸದಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಅದರ ಅನುಷ್ಠಾನ ಮಾತ್ರ ಆಗದೆ ಇರುವುದೇ ಈ ಸಂಘರ್ಷ ಮುಂದುವರಿಯಲು ಕಾರಣ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಆನೆ ಸಂರಕ್ಷಣೆ ಆರೈಕೆ ಮತ್ತು ಪುನರ್ವಸತಿ ಶಿಬಿರದ ಸರ್ಕಾರದ ಪ್ರಸ್ತಾವನೆ ಕೊಡಗಿನಲ್ಲಿ ಸ್ಥಾಪಿಸುವ ಕುರಿತು ಚಿಂತನೆ ಇನ್ನು ಚರ್ಚೆಯಲ್ಲಿದೆ.ಕೊಡಗು ಜಿಲ್ಲೆಯ ಸಿದ್ದಾಪುರ ಆನಂದಪುರ ಮತ್ತು ಸುತ್ತಮುತ್ತಲಿನ ಕಾಫಿ ಎಸ್ಟೇಟ್ ಗಳು ಸೇರಿದಂತೆ ಮಡಿಕೇರಿ ಸೋಮವಾರಪೇಟೆ ವ್ಯಾಪ್ತಿಯ ಜನವಸತಿ ಪ್ರದೇಶ ಮತ್ತು ಮುಖ್ಯ ಹೆದ್ದಾರಿಗಳಲ್ಲಿ ಕೂಡ ಆನೆಗಳ ದಾಳಿ ಆಗಾಗ್ಗೆ ಸಂಭವಿಸುತ್ತಿರುವುದು ಈ ಭಾಗದ ಜನರಿಗೆ ಆತಂಕಕಾರಿ ಬೆಳವಣಿಗೆ ಆಗಿದೆ.ಅರಣ್ಯದಲ್ಲಿ ಮಾನವನ ಹಸ್ತಕ್ಷೇಪ ಏರಿಕೆ ಆಗುವ ಹಿನ್ನಲೆಯಲ್ಲಿ ಪ್ರಸಕ್ತ ದಿನಗಳಲ್ಲಿ ಹೆದ್ದಾರಿಯಲ್ಲಿ ಆನೆಗಳು ಪ್ರತ್ಯಕ್ಷ ಆಗುತ್ತಿವೆ. ಒಟ್ಟಾರೆ ಕಾಡಿನಲ್ಲಿರುವ ಆನೆಗಳು ನಾಡಿಗೆ ಬರಲು ಕಾರಣವಾಗಿರುವ ಮಾನವನ ಅತಿಯಾದ ಹಸ್ತಕ್ಷೇಪ ಕಡಿಮೆ ಆಗುವುದರೊಂದಿಗೆ ವನ್ಯಜೀವಿಗಳಿಗೆ ಅಗತ್ಯವಾದ ಮೇವು ಆಹಾರವನ್ನು ಅರಣ್ಯದೊಳಗೆ ಕಲ್ಪಿಸಿ ಕೊಡುವ ವ್ಯವಸ್ಥೆಯನ್ನು ಇಲಾಖೆ ಸರ್ಕಾರ ರೂಪಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆಯನ್ನು ಕಲ್ಪಿಸಬೇಕಾಗಿದೆ.