ರಾಜ್ಯದಲ್ಲಿ ಶ್ರೇಷ್ಠ ನಟರು, ನಿರ್ದೇಶಕರಿದ್ದಾರೆ. ಅಂತಹ ಶ್ರೇಷ್ಠ ನಿರ್ದೇಶಕರ ಶ್ರೇಣಿಯಲ್ಲಿ ಖ್ಯಾತಿ ಪಡೆದಿರುವ ರಂಗಕರ್ಮಿ ಮತ್ತು ಸಾಂಸ್ಕೃತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆಯಲ್ಲಿ ನಾಗರಂಗ ನಾಟಕೋತ್ಸವ ನಡೆಸುತ್ತಿರುವ ಕನ್ನಡ ಸಂಘದ ಪದಾಧಿಕಾರಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಟಕ, ರಂಗಭೂಮಿ ಮತ್ತು ಕಲಾವಿದರ ಇತಿಹಾಸ ಬಹಳ ದೊಡ್ಡದು. ರಂಗಭೂಮಿಗೆ ದೊಡ್ಡ ವೈಭವ ತಂದುಕೊಟ್ಟ ಗುಬ್ಬಿ ವೀರಣ್ಣರನ್ನು ಎಂದಿಗೂ ಕೂಡ ಮರೆಯಬಾರದು ಎಂದು ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಸಾಂಸ್ಕೃತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ಆಯೋಜಿಸಿದ್ದ 18ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದಲ್ಲಿ ನುಡಿ ಗೌರವ ಸ್ವೀಕರಿಸಿ ಮಾತನಾಡಿ, ಗುಬ್ಬಿ ವೀರಣ್ಣ ಅವರು ನಮ್ಮ ನಿಮ್ಮಂತೆ ಶಾಲೆ, ಕಾಲೇಜು, ವಿವಿಗಳಲ್ಲಿ ಕಲಿತವರಲ್ಲ. ಆದರೆ, ಅವರನ್ನು ಕುರಿತಾದ ಪಾಠಗಳು ವಿಶ್ವವಿದ್ಯಾಲಯಗಳಲ್ಲಿವೆ ಎಂದರು.

ರಾಜ್ಯದಲ್ಲಿ ಶ್ರೇಷ್ಠ ನಟರು, ನಿರ್ದೇಶಕರಿದ್ದಾರೆ. ಅಂತಹ ಶ್ರೇಷ್ಠ ನಿರ್ದೇಶಕರ ಶ್ರೇಣಿಯಲ್ಲಿ ಖ್ಯಾತಿ ಪಡೆದಿರುವ ರಂಗಕರ್ಮಿ ಮತ್ತು ಸಾಂಸ್ಕೃತಿಕ ಚಿಂತಕ ದಿ.ಚಿದಂಬರರಾವ್ ಜಂಬೆ ಅವರ ನೆನಪಿನ ವೇದಿಕೆಯಲ್ಲಿ ನಾಗರಂಗ ನಾಟಕೋತ್ಸವ ನಡೆಸುತ್ತಿರುವ ಕನ್ನಡ ಸಂಘದ ಪದಾಧಿಕಾರಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಶ್ಲಾಘಿಸಿದರು.

ನಾಡಿನಲ್ಲಿ ಜಾನಪದ ಕಲೆಯನ್ನು ಗುರುತಿಸದ ಮತ್ತು ವಿಶ್ವವಿದ್ಯಾಲಯಗಳ ಮೆಟ್ಟಿಲು ಏರದಂತಹ ಕಾಲಘಟ್ಟದಲ್ಲಿಯೇ ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಜಾನಪದ ಸಮ್ಮೇಳನವನ್ನು ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದು ನಾಗಮಂಗಲ. ಕಲೆ ಹಾಗೂ ಕಲಾವಿದರನ್ನು ಗೌರವಿಸುವ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಗೆ ಈ ನೆಲ ರಾಯಭಾರಿಯಾಗಿದೆ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು.

ರಂಗ ಗೌರವ ಸ್ವೀಕರಿಸಿದ ನಟ, ನಿರ್ದೇಶಕ ಪ್ರಶಾಂತ ಹಿರೇಮಠ ಮಾತನಾಡಿ, ಕೆಲ ಜೀವಗಳು ಹಾಗೂ ಮನುಷ್ಯರು ಪರಸ್ಪರ ಹಂಚಿಕೊಂಡ ನಿಸ್ವಾರ್ಥ ನಂಟುಗಳು ಮಾತ್ರ ಕಾಲದ ಯಾವ ಹೊಡತಕ್ಕೂ ಮಸುಕಾಗದೆ ಹೃದಯದ ಗರ್ಭಗುಡಿಯಲ್ಲಿ ದೀಪದಂತೆ ಸದಾ ಬೆಳಗುತ್ತವೆ ಎಂದರು.

ರಂಗಭೂಮಿ ಎನ್ನುವುದು ಎಂದಿಗೂ ಒಬ್ಬರ ಸಾಧನೆಯಲ್ಲ. ಅದೊಂದು ಸಮಷ್ಟಿ ತಪಸ್ಸು. ನಮ್ಮ ಸುತ್ತಲಿನ ಸಮಾಜ ಮತ್ತು ಆಧುನಿಕ ಜಗತ್ತನ್ನು ನೋಡಿದಾಗ ನಾವೆಲ್ಲರೂ ಎತ್ತ ಸಾಗುತ್ತಿದ್ದೇವೆಂಬ ಆತಂಕ ಕಾಡುತ್ತದೆ. ಇಂದಿನ ಮನುಷ್ಯ ತನ್ನದೇ ಆದ ಸಂಕುಚಿತ ಕನ್ನಡಿಯ ಮುಂದೆ ನಿಂತು ತನ್ನ ಮುಖವನ್ನು ತಾನೇ ನೋಡಿ ಬೀಗುವ ಆತ್ಮಸಂವಾದಿ ಎಂಬ ಮಹಾಲೋಕಕ್ಕೆ ಬಲಿಯಾಗಿದ್ದಾನೆ. ಪಕ್ಕದ ಮನುಷ್ಯನ ಕಣ್ಣೀರನ್ನು ಕಾಣದಷ್ಟು ಇನ್ನೊಬ್ಬರ ನೋವಿಗೆ ಮಿಡಿಯದಷ್ಟು ನಮ್ಮ ಸ್ವಂತ ಅಹಂಕಾರದ ಪರದೆಗಳು ನಮ್ಮ ಕಣ್ಣುಗಳನ್ನು ಮುಚ್ಚಿಬಿಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಂಘದ ಅಧ್ಯಕ್ಷ ಎನ್.ಟಿ.ಅಶೋಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಲನಚಿತ್ರ ನಟ ರಾಮಕೃಷ್ಣ, ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ, ಕಾರ್ಯದರ್ಶಿ ಉಮಾ ಶುಭಮೂರ್ತಿ, ಸಂಚಾಲಕ ಲ.ಬಾಲಕೃಷ್ಣ, ಖಜಾಂಚಿ ರಾಜಶೇಖರ, ಮಾಜಿ ಅಧ್ಯಕ್ಷರಾದ ರಮಾನಂದ, ಮೀರಾ ಬಾಲಕೃಷ್ಣ, ಎನ್.ನಟರಾಜ್, ಪ್ರಶಾಂತ್‌ಮಧು, ಎಂ.ಎನ್.ಮಂಜುನಾಥ್, ಸದಸ್ಯರಾದ ಪುಟ್ಟಮ್ಮ ಮಾಯಣ್ಣಗೌಡ, ಎನ್.ಮುರಳೀಧರ, ಎನ್.ಸಿ.ಶಿವಕುಮಾರ್, ಈರಪ್ಪ, ಶಿವಣ್ಣಗೌಡ, ಪ್ರಶಾಂತ್, ರತ್ನಮ್ಮ, ಗೀತಾದಾಸೇಗೌಡ ಸೇರಿದಂತೆ ಹಲವರು ಇದ್ದರು.