ತುಂಬುದೇವನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗೋಡನಹಳ್ಳಿಯಲ್ಲಿ ಪ್ರಧಾನಮಂತ್ರಿ ಆಯುಷ್ ಭಾರತ್ ಯೋಜನೆಯಡಿಯ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 65 ಲಕ್ಷ ರುಪಾಯಿಗಳಲ್ಲಿ ನಿರ್ಮಿಸಲಾಗುತ್ತಿರುವ ಆಯುಷ್ ಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಆಸ್ಪತ್ರೆಯ ಮೇಲ್ಭಾಗದಲ್ಲಿ ವೈದ್ಯರ ಕ್ವಾಟ್ರಸ್, ಕೆಳಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಆಯುಷ್ಯ ಮಂದಿರ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಆಯುಷ್ ಆರೋಗ್ಯ ಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು ಮಲೆನಾಡು ಭಾಗದ ಕೂಲಿ ಕಾರ್ಮಿಕರು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು. ತುಂಬುದೇವನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗೋಡನಹಳ್ಳಿಯಲ್ಲಿ ಪ್ರಧಾನಮಂತ್ರಿ ಆಯುಷ್ ಭಾರತ್ ಯೋಜನೆಯಡಿಯ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 65 ಲಕ್ಷ ರುಪಾಯಿಗಳಲ್ಲಿ ನಿರ್ಮಿಸಲಾಗುತ್ತಿರುವ ಆಯುಷ್ ಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಚಿಕಿತ್ಸೆ ದೊರಕಬೇಕು. ಆಸ್ಪತ್ರೆಯ ಮೇಲ್ಭಾಗದಲ್ಲಿ ವೈದ್ಯರ ಕ್ವಾಟ್ರಸ್, ಕೆಳಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಆಯುಷ್ಯ ಮಂದಿರ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು ಬೇಲೂರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ 24 ಆಯುಷ್ ಮಂದಿರ್ ಆಸ್ಪತ್ರೆಗಳು ಮಂಜೂರಾಗಿದ್ದು ಇಂದು ಪ್ರಥಮವಾಗಿ ಮಲೆನಾಡು ಭಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಮಲೆನಾಡು ಭಾಗ ಕೂಲಿ ಕಾರ್ಮಿಕರು, ಬಡವರು, ಶಾಲಾ ಮಕ್ಕಳು ವೃದ್ಧರಿಗೆ ಚಿಕಿತ್ಸೆ ಕೊಡಿಸಲು ಅದೇಹಳ್ಳಿ ಬೇಲೂರು ಸಕಲೇಶಪುರಕ್ಕೆ ತೆರಳಬೇಕಿದೆ. ಆನೆಗಳ ಕಾಟದಿಂದ ಜನರು ರಾತ್ರಿ ವೇಳೆ ಆಸ್ಪತ್ರೆಗೆ ತೆರಳಲು ಹೆದರುತ್ತಿದ್ದಾರೆ. ಇದನ್ನು ಮನಗಂಡು ಈ ಭಾಗದಲ್ಲಿ ಆಯುಷ್ಯ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ. ಕಾಮಗಾರಿಯ ಉತ್ತಮ ಮಟ್ಟದಲ್ಲಿರಬೇಕು, ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದರು.ತುಂಬು ದೇವನಹಳ್ಳಿ ಗ್ರಾಪಂ ಆವರಣದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಪಂಚಾಯಿತಿ ಮುಂಭಾಗ ದ್ವಾರ ಬಾಗಿಲು ಲೋಕಾರ್ಪಣೆ ಮಾಡಲಾಗಿದೆ. ತಾಲೂಕಿನ 37 ಗ್ರಾಮ ಪಂಚಾಯಿತಿಯಲ್ಲಿ ತುಂಬುದೇವನಳ್ಳಿ ಮಾದರಿ ಗ್ರಾಮ ಪಂಚಾಯಿತಿಯಲ್ಲಿ ಇದೇ ಪ್ರಥಮ ಬಾರಿಗೆ ದ್ವಾರ ಕಮಾನು ನಿರ್ಮಿಸಿರುವುದು ಶ್ಲಾಘನೀಯ. ಗ್ರಂಥಾಲಯ ಇದ್ದರೆ ಜ್ಞಾನ ಬಂಡಾರ ಇದ್ದಂಗೆ, ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಪುಸ್ತಕ ಓದುವುದರಿಂದ ಮನುಷ್ಯನ ಜ್ಞಾನ ವೃದ್ಧಿಸುತ್ತದೆ, ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗುತ್ತದೆ, ಮಲೆನಾಡು ಭಾಗ ವಿಸ್ತೀರ್ಣನದಲ್ಲಿ ಹೆಚ್ಚಿದ್ದು ರಸ್ತೆಗಳು ಕಿರಿದು, ರಸ್ತೆ ಅಭಿವೃದ್ಧಿಗಾಗಿ ಹಾಗೂ ಶುಭಕಾರ್ಯಗಳಿಗೆ ಸಮುದಾಯ ಭವನ ನಿರ್ಮಿಸಲು ಅನುದಾನ ತರಲು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಲಾಗುವುದು. ಪ್ರಜೆಗಳು ತಮ್ಮ ಮೇಲೆ ಇಟ್ಟಿರುವ ಅಭಿಮಾನವನ್ನು ಶಾಸಕರು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾತಿ, ಧರ್ಮ ಬಿಟ್ಟು ರಾಜಕೀಯ ತಂತ್ರಗಾರಿಕೆ ಮಾಡದೆ ಎಲ್ಲಾ ಗ್ರಾಮಗಳನ್ನು ಸರಿಸಮನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ತುಂಬುದೇವನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೇಶ್ ಮಾತನಾಡಿ ಈ ಭಾಗದಲ್ಲಿ ರೈತರು ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಈ ಭಾಗದಲ್ಲಿ ಸಮುದಾಯ ಭವನ, ಹಾಗೂ ಅಂಬೇಡ್ಕರ್ ಭವನ ಅವಶ್ಯಕತೆ ಇದ್ದು ಶಾಸಕರು ಆದಷ್ಟು ಬೇಗ ಎರಡು ಭವನಗಳನ್ನು ನಿರ್ಮಿಸಿಕೊಟ್ಟರೆ ಬಡವರಿಗೆ ಅನುಕೂಲವಾಗುತ್ತದೆ. ಮಲೆನಾಡು ಭಾಗದಲ್ಲಿ ಸರ್ಕಾರಿ ಜಾಗಗಳನ್ನು ಕೆಲ ಪ್ರಭಾವಿಗಳು ಒತ್ತುವರಿಮಾಡಿಕೊಂಡಿದ್ದಾರೆ, ಕೆರೆಗಳು, ಶಾಲಾ ಜಾಗಗಳು ಒತ್ತುವರಿಯಾಗಿದೆ, ಸೂಕ್ತ ದಾಖಲೆ ಪಡೆದು ಒತ್ತುವರಿಯನ್ನು ತೆರೆವುಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲೋಲಾಕ್ಷಿ, ಸದಸ್ಯರಾದ ಲಲಿತ, ಮಾಜಿ ಅಧ್ಯಕ್ಷ ಮಲ್ಲೇಶ್, ಜೀವನ್ ಯೋಗೇಶ್, ಅಭಿವೃದ್ಧಿ ಅಧಿಕಾರಿ ವಾಸು ಚಂದನ್, ಗುಂಡ, ಸುಭಾಷ್, ಸಂತೋಷ್, ತಾಸೀನಾ ಇಲಾಖೆ ಅಧಿಕಾರಿಗಳು ಇದ್ದರು.