ಸಾರಾಂಶ
ಬ್ಯಾಡಗಿ: ನಾಡಿನ ಸಾವಿರಾರು ಮಠಗಳಲ್ಲಿ ಶ್ರೇಷ್ಠ ಪರಂಪರೆಯ ಮಠವಾಗಿರುವ ಕ್ಷೇತ್ರದಲ್ಲಿ ಮೂಕಪ್ಪ ಶ್ರೀಗಳ ಪವಾಡ ಅದ್ಭುತವಾಗಿವೆ ಎಂದು ಮಡ್ಲೂರು ಮಠದ ಮುರುಘರಾಜೇಂದ್ರ ಶ್ರೀಗಳು ತಿಳಿಸಿದರು.
ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಹಾಗೂ ಮೂಕಪ್ಪಸ್ವಾಮಿಗಳ ಉತ್ಸವ, ಗುಗ್ಗಳ, ೭೦ನೇ ಶಿವಾನುಭವ ಹಾಗೂ ಹಿರಿಯ ಮೂಕಪ್ಪಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಡಿನಲ್ಲಿ ಮಠದ ಪರಂಪರೆಗಳಲ್ಲಿ ಗುಡ್ಡದಮಲ್ಲಾಪುರ ಶ್ರೇಷ್ಠ ಹಾಗೂ ಭಿನ್ನತೆಯ ಮೂಲಕ ಗುರ್ತಿಸಿಕೊಂಡಿದೆ. ಎಲ್ಲ ಮಠಗಳಲ್ಲಿ ಮಠಾಧೀಶರೇ ಉತ್ತರಾಧಿಕಾರಿಗಳು, ಆದರೆ ಇಲ್ಲಿ ಮೂಕಬಸವ (ವೃಷಭರೂಪಿ) ಮಠದ ಪಟ್ಟಾಧಿಕಾರ ವಹಿಸುತ್ತಿದ್ದು, ಇಂತಹ ಮಠ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. 1954ರಲ್ಲಿ ಧಾರವಾಡದ ಮೃತ್ಯುಂಜಯ ಶ್ರೀಗಳು ಶಿವಾನುಭವ ಕಾರ್ಯಕ್ರಮ ಆರಂಭಿಸಿ ಈವರೆಗೆ 70 ವರ್ಷ ದಾಟಿರುವುದು ಶ್ರೀಗಳ ಆಶೀರ್ವಾದ ಶಕ್ತಿ ಕಾರಣ ಎಂದರು. ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ತುಲಾಭಾರಕ್ಕೆ ಚಾಲನೆ ನೀಡಿದ್ದು, 14 ವರ್ಷ ಕಂಡಿದೆ. ತ್ರಿವಿಧ ದಾಸೋಹಿ ಎನಿಸಿರುವ ಮೂಕಪ್ಪ ಶ್ರೀಗಳ ಪವಾಡ ಪುರುಷರು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯರು, ಅಂಗಡಿ ಅಕ್ಕಿ ಮಠದ ಶ್ರೀಗಳು, ರಾಣಿಬೆನ್ನೂರು ಶನೀಶ್ವರ ಮಠದ ಶಿವಯೋಗಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಬೆಳಗ್ಗೆ 8 ಗಂಟೆಗೆ ಹುಚ್ಚೇಶ್ವರ ಶಿವಾಚಾರ್ಯರ ಕರ್ತೃಗದ್ದುಗೆ ಕ್ಷೀರಾಭಿಷೇಕ, ಮದ್‌ವೀರಶೈವ ಪಂಚಾಚಾರ್ಯ ದ್ವಜಾರೋಹಣ, ಮೂಕಪ್ಪಸ್ವಾಮಿಗಳ ಉತ್ಸವ, ಗುಗ್ಗಳ, ರಥೋತ್ಸವ ಜರುಗಿದವು.ಯತ್ತಿನಹಳ್ಳಿ ಗ್ರಾಮದ ಮನ್ವಿತಗೌಡ ಪಾಟೀಲ ಕುಟುಂಬಸ್ಥರು 14ನೇ ನಾಣ್ಯಗಳ ತುಲಾಭಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಕೀಲ ವಿ.ಜಿ. ಯಳಗೇರಿ, ಶಿವಾನಂದಯ್ಯಸ್ವಾಮಿ ದಾಸೋಹಮಠ, ಮಂಜನಗೌಡ್ರ ಲಿಂಗನಗೌಡ್ರ, ಹುಚ್ಚಯ್ಯ ಹಮ್ಮಗಿ, ಲಿಂಗರಾಜ ಕುಮ್ಮೂರು, ಉಳಿವೆಪ್ಪ ಮಡ್ಲೂರು, ಪ್ರಭುಗೌಡ್ರ ನಾಗನಗೌಡ್ರ,ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಹಿರಿಯರು ಇದ್ದರು.