ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ

| Published : Feb 02 2024, 01:01 AM IST

ಸಾರಾಂಶ

ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ 31.40 ಲಕ್ಷ ರು. ಗಳ ವೆಚ್ಚದ ಆಸ್ಪಿರೇಷನಲ್ (ಹೈಟೆಕ್ ಶೌಚಾಲಯ) ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ 31.40 ಲಕ್ಷ ರು. ಗಳ ವೆಚ್ಚದ ಆಸ್ಪಿರೇಷನಲ್ (ಹೈಟೆಕ್ ಶೌಚಾಲಯ) ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಲಾರಿ ಸ್ಟ್ಯಾಂಡ್‌ ಹತ್ತಿರದಲ್ಲಿ ನಗರಸಭೆ ವತಿಯಿಂದ ಸ್ವಚ್ಚಭಾರತ್ ಮಿಷನ್ ಯೋಜನೆಯಡಿ 750 ಚದರ ಅಡಿಗಳ ಆಸ್ಪಿರೇಷನಲ್ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಶಾಸಕರು ಗುದ್ದಲಿಪೂಜೆ ಮಾಡಿದರು. ಬಳಿಕ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಮರಾಜನಗರಕ್ಕೆ ಆಸ್ಪಿರೇಷನಲ್ (ಹೈಟೆಕ್ ಶೌಚಾಲಯ) ಶೌಚಾಲಯ ಅವಶ್ಯವಾಗಿತ್ತು. ಪಟ್ಟಣದ ನಾಗರೀಕರಿಗೆ ಹಾಗೂ ಇತರೆಡೆಯಿಂದ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 31.40 ಲಕ್ಷ ರು. ವೆಚ್ಚದ ಆಸ್ಪಿರೇಷನಲ್ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.ಆಸ್ಪಿರೇಷನಲ್ ಶೌಚಾಲಯದಲ್ಲಿ ಪ್ರತ್ಯೇಕವಾಗಿ ಪುರುಷರು ಹಾಗೂ ಮಹಿಳೆಯರಿಗಾಗಿ ತಲಾ ಎರಡು ಸಾಮಾನ್ಯ (ಟಾಯ್ಲೆಟ್) ಶೌಚಾಲಯಗಳು, ಎರಡು ಯುರೋಪಿಯನ್ (ಟಾಯ್ಲೆಟ್) ಶೌಚಾಲಯಗಳು, ಪುರುಷ ಹಾಗೂ ಮಹಿಳಾ ವಿಶೇಷಚೇತನರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ತಲಾ ಒಂದೊಂದು ಶೌಚಾಲಯಗಳಿದ್ದು, ಈ ಶೌಚಾಲಯಗಳಿಗೆ ಹೊಂದಿಕೊಂಡಂತೆ ಸ್ನಾನದ ಗೃಹಗಳಿರಲಿವೆ. ಅಲ್ಲದೆ ಮಹಿಳೆಯರು ಬಟ್ಟೆ ಬದಲಾಯಿಸುವ ಒಂದು ಕೊಠಡಿ, ಫೀಡಿಂಗ್ ರೂಮ್ ಹಾಗೂ ಶೌಚಾಲಯ ಕಾವಲುಗಾರರಿಗೆ ಒಂದೊಂದು ಕೊಠಡಿಗಳು ಇರಲಿವೆ ಎಂದು ತಿಳಿಸಿದರು.ನಗರಸಭಾ ಸದಸ್ಯರಾದ ಮಹೇಶ್, ಖಲೀಲ್ ಉಲ್ಲಾ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಜೂನಿಯರ್ ಎಂಜಿನಿಯರ್ ರಾಜು ಮತ್ತು ಮಂಜುನಾಥ್, ಇದ್ದರು.