ಗೂಡೆಹೊಸಹಳ್ಳಿ ಏತ ನೀರಾವರಿಯ ಯೋಜನಾ ವೆಚ್ಚವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ ಶಾಸಕ ಮಂಜು, ೬ ವರ್ಷಗಳು ಕಳೆದರೂ ಈ ಯೋಜನೆ ಜನರಿಗೆ ತಲುಪುತ್ತಿಲ್ಲವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ.

ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ

ಆರು ವರ್ಷಗಳ ಹಿಂದೆ ಆರಂಭವಾದ ತಾಲೂಕಿನ ಪ್ರಮುಖ ಏತ ನೀರಾವರಿ ಯೋಜನೆಯಾದ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಯೋಜನೆಗೆ ಅಡ್ಡಿಯಾಗಿರುವ ಸಮಸ್ಯೆಗಳ ಕುರಿತಂತೆ ಶಾಸಕ ಎಚ್.ಟಿ.ಮಂಜು ಗುರುವಾರ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಗೂಡೆಹೊಸಹಳ್ಳಿ ಪಂಪ್ ಹೌಸ್‌ಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿಯೆ ತುರ್ತಾಗಿ ಕಂದಾಯ ಇಲಾಖೆಯ ಸಮಸ್ಯೆ ಬಗೆಹರಿಸುವಂತೆ ನಿರ್ದೇಶಿಸಿದರು.

ಶಾಸಕರ ಭೇಟಿಯ ವೇಳೆ ಸ್ಥಳಕ್ಕೆ ಆಗಮಿಸಿದ ರೈತರು ನೀರಾವರಿ ಇಲಾಖೆಯ ಕಿಕ್ಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಧಾ ಜೈನ್ ಅವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಾರದೆ ಪರದಾಡಿದ ಸುಧಾ ಅವರನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡರು.

ಏತ ನೀರಾವರಿಯ ಯೋಜನಾ ವೆಚ್ಚವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ ಶಾಸಕ ಮಂಜು, ೬ ವರ್ಷಗಳು ಕಳೆದರೂ ಈ ಯೋಜನೆ ಜನರಿಗೆ ತಲುಪುತ್ತಿಲ್ಲವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ಯೋಜನೆಗೆ ನಿಗದಿಪಡಿಸಲಾದ ಒಟ್ಟು ೨೧೬ ಕೆರೆಗಳಲ್ಲಿ ೧೦೬ ಕೆ.ಆರ್.ಪೇಟೆ ಭಾಗದಲ್ಲಿದ್ದರೆ ೧೦೫ ಕೆರೆಗಳು ನಾಗಮಂಗಲ ಭಾಗದಲ್ಲಿವೆ. ಹಾಗೂ ೫ ಕೆರೆಗಳು ಚನ್ನರಾಯಪಟ್ಟಣ ಭಾಗದಲ್ಲಿವೆ. ಯೋಜನೆಯ ಮೊದಲ ಹಂತದ ಪೈಪ್ ಲೈನ್ ಕಾಮಗಾರಿ ಹೆಚ್ಚು ಕಡಿಮೆ ಮುಗಿದಿದ್ದರೂ ಗೂಡೇಹೊಸಹಳ್ಳಿ, ತೊಳಸಿ, ಸಾಸಲು, ಅಘಲಯ ಮತ್ತು ಚನ್ನರಾಯಪಟ್ಟಣ ತಾಲೂಕಿನ ಕೆ.ಹೊಸಹಳ್ಳಿ ಗ್ರಾಮ ವ್ಯಾಪ್ತಿಯ ರೈತರ ಎರಡು-ಮೂರು ಗುಂಟೆ ಜಾಗದ ಪರಿಹಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದ್ದು ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲು ಅಡ್ಡಿಯಾಗಿದೆ ಎಂದು ದೂಷಿಸಿದರು.

ಯೋಜನಾ ವ್ಯಾಪ್ತಿಯ ೧೫೬ ರೈತರಿಗೆ ಈಗಾಗಲೇ ೧.೮೦ ಕೋಟಿ ರು.ಪರಿಹಾರ ವಿತರಿಸಲಾಗಿದೆ. ನಾಗಮಂಗಲ ಕ್ಷೇತ್ರದ ಶಾಸಕರೇ ಪ್ರಸ್ತುತ ಜಲಸಂಪನ್ಮೂಲ ಸಚಿವರಾಗಿದ್ದು ನಾನು ಅಘಲಯ ಪಂಪ್‌ಹೌಸ್‌ಗೆ ನೀರನ್ನು ತಲುಪುವಂತೆ ಮಾಡಿ. ನಂತರ ಉಳಿಕೆ ಕೆಲಸ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಖುದ್ದು ಸಚಿವರೇ ಪಾಂಡವಪುರ ಉಪ ವಿಭಾಗಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಂದಾಯ ಇಲಾಖೆಯ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಇನ್ನೊಂದು ವಾರದ ಒಳಗಾಗಿ ಸಮಸ್ಯೆ ಪರಿಹರಿಸಿಕೊಡುವುದಾಗಿ ಉಪ ವಿಭಾಗಾಧಿಕಾರಿಗಳು ಭರವಸೆ ನೀಡಿದ್ದು ಸದ್ಯದಲ್ಲಿಯೆ ಕೆರೆ ಕಟ್ಟೆಗಳನ್ನು ತುಂಬಿಸಿಕೊಡುವುದಾಗಿ ಶಾಸಕ ಮಂಜು ಜನರಿಗೆ ತಿಳಿಸಿದರು.

ಪೈಪ್‌ಲೈನ್‌ನ್ನು ಸುಲಲಿತವಾಗಿ ಅಳವಡಿಸಲು ಈ ಭಾಗಗಳ ರೈತ ಮನವನ್ನು ಒಲಿಸಿ ಜಾಗವನ್ನು ನೀರಾವರಿ ಇಲಾಖೆಗೆ ಬಿಡಿಸಿಕೊಡಲಾಗಿತ್ತು. ಆದರೆ, ಇದುವರೆವಿಗೂ ಅಂತಹ ರೈತರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಪರಿಹಾರವನ್ನು ನೀಡಿಲ್ಲ. ಇದು ಕೂಡಾ ಸಮಸ್ಯೆಯಾಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ತಾಲೂಕಿನ ಗೂಡೆಹೊಸಹಳ್ಳಿ, ಸಾಸಲು ಮತ್ತು ಅಘಲಯಗಳಲ್ಲಿ ರೈತರಿಗೆ ಕೊಡಬೇಕಾದ ಪರಿಹಾರವನ್ನು ಪಡೆಯಲು ಬೇಕಾದ ಕಂದಾಯದ ದಾಖಲಾತಿಗಳನ್ನು ಸಿದ್ದಪಡಿಸಿಕೊಟ್ಟು ನೀರಾವರಿ ಇಲಾಖೆಯ ಹೆಸರಿಗೆ ವರ್ಗಾವಣೆ ಮಾಡಿ ಯೋಜನೆಗೆ ಚಾಲನೆ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಮಂಜು ನಿರ್ದೇಶನ ನೀಡಿದರು.

ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್.ಜೆ.ಸುಧಾ, ಸಹಾಯಕ ಅಭಿಯಂತರ ರಾಕೇಶ್, ರಾಜಸ್ವ ನಿರೀಕ್ಷಕ ನರೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ನಿರ್ದೇಶಕರಾದ ಮಧು ಕೆ.ಬಿ., ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹುಲ್ಲೇಗೌಡ, ಮುಖಂಡರಾದ ಕಿಕ್ಕೇರಿ ಶೇಖರ್, ಹುಬ್ಬನಹಳ್ಳಿ ಬಲರಾಮೇಗೌಡ, ಕಡಹೆಮ್ಮಿಗೆ ವೆಂಕಟೇಶ್, ಆಪ್ತ ಸಹಾಯಕರದ ಪ್ರತಾಪ್, ಧೃವ ಸೇರಿದಂತೆ ಹಲವರಿದ್ದರು.