ಇಂದಿನಿಂದ 2 ದಿನ ಗುಡೇಕೋಟೆ ಉತ್ಸವ

| Published : Feb 24 2024, 02:30 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 2 ದಿನಗಳ ಗುಡೇಕೋಟೆ ಉತ್ಸವ ಸರ್ಕಾರಿ ಉತ್ಸವವಾಗಿ ಆಚರಣೆಯಾಗುತ್ತಿದ್ದು, ಐತಿಹಾಸಿಕ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ಸಂಜೆ 6 ಗಂಟೆಗೆ ಒನಕೆ ಓಬವ್ವ ವೇದಿಕೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಚಿವರಾದ ಶಿವರಾಜ್ ತಂಗಡಗಿ, ಎಚ್.ಕೆ. ಪಾಟೀಲ್, ಸಂತೋಷ್ ಲಾಡ್, ಬಿ. ನಾಗೇಂದ್ರ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಎಚ್.ಆರ್. ಗವಿಯಪ್ಪ, ಕೃಷ್ಣನಾಯ್ಕ, ಬಿ. ದೇವೇಂದ್ರಪ್ಪ, ಕೆ. ನೇಮರಾಜನಾಯ್ಕ, ಎಂ.ಪಿ. ಲತಾ ಮಲ್ಲಿಕಾರ್ಜುನ ಇತರರು ಪಾಲ್ಗೊಳ್ಳುವರು.

ಪಾಳೇಗಾರರ ನಾಡು: ಗುಡೇಕೋಟೆ ಎಂದರೆ ಪಾಳೇಗಾರರ ನಾಡು, ಗುಡ್ಡ, ಕೋಟೆಗಳ ಬೀಡು, ಓಬವ್ವನ ತವರು. ಕರಡಿಧಾಮವೂ ಆಗಿದೆ. ಆದಿಮಾನವ ವಾಸಿಸಿದ ಕುರುಹುಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ನಾಗರೀಕತೆಗಿಂತಲೂ ಮುಂಚೆ ಜನವಸತಿ ಕೇಂದ್ರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಗುಡೇಕೋಟೆ ಸುತ್ತಮುತ್ತ ದೊರೆಯುವ ಆದಿಮಾನವ ವಾಸಿಸಿದ್ದ ಗುಹೆಗಳು, ಬಂಡೆಕಲ್ಲಿನ ಮೇಲಿರುವ ರೇಖಾಚಿತ್ರಗಳು, ಕಲ್ಲಿನಲ್ಲಿ ಮಾಡಿದ ಆಯುಧಗಳು ದೊರೆತಿವೆ.ಶಿಲಾಯುಗದ ಕಾಲ: ದೇಶದ ಶಿಲಾಯುಗ ಕಾಲಮಾನದಲ್ಲಿ ಮಾನವನು ವಾಸಿಸುವ ಕುರುಹುಗಳನ್ನು ದೇಶದ ಕೆಲವು ಭಾಗಗಳಲ್ಲಿ ನಿಲುವುಗಲ್ಲುಗಳನ್ನು ಕಾಣುತ್ತೇವೆ. ಪಕ್ಷಿಯಾಕಾರದ ಮತ್ತು ಅಸ್ಪಷ್ಟ ಮಾನವನಾಕೖತಿಯ ಶಿಲ್ಪಗಳು ಆಂಧ್ರಪ್ರದೇಶದ ನಿಡಿಮಿಲ್ಲ, ದೊಮಾಡ, ತೃತಿಗುಟ್ಟ, ಡೊಂಗಾ ಟೊಗು ಹಾಗೂ ತಮಿಳುನಾಡಿನ ವೆಟ್ಟೂರು, ಕನಾ೯ಟಕದ ಐಹೊಳೆ, ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ಲು, ಮಡಿಕೇರಿ ಹತ್ತಿರದ ರಾಮಸ್ವಾಮಿ ಕಣಿವೆಗಳಲ್ಲಿ ದೊರೆತಿದ್ದರೂ ಅವು ಯಾವೂ ಸ್ಪಷ್ಟ ಮಾನವನ ಆಕೃತಿ ಹೋಲುವುದಿಲ್ಲ. ಆದರೆ ಗುಡೇಕೋಟೆ ಹೋಬಳಿಯ ಕುಮತಿ, ಹುಲಿಕುಂಟೆ ಗ್ರಾಮಗಳ ಹೊರವಲಯದಲ್ಲಿ ಸಿಗುವ ನಿಲುವುಗಲ್ಲುಗಳು(ರಕ್ಕಸಗಲ್ಲುಗಳು) ಸ್ಪಷ್ಟವಾಗಿ ಮಾನವನಾಕೃತಿ ಹೊಂದಿವೆ ಎಂದು ಪುರಾತತ್ವ ಇಲಾಖೆಯ ಸಂಶೋಧಕ ಕೆ.ಪು. ಪೂಣಚ್ಚ ಮತ್ತು ತಂಡ ದೃಢಪಡಿಸಿದೆ. ಕಪ್ಪುಕರಡಿಗಳ ನೆಲೆಬೀಡು: ಗುಡೇಕೋಟೆ ಕರಡಿಧಾಮ ಇದೀಗ ಪ್ರವಾಸಿ ತಾಣವಾಗುವತ್ತ ತನ್ನ ಸೌಂದರ್ಯ, ವಿಸ್ಮಯಗಳಿಂದ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಇಲ್ಲಿಯ ಕಾಡಿನ ಮಧ್ಯದಲ್ಲಿರುವ ವಿಸ್ಮಯ ಮೂಡಿಸಲು ಡೊಕ್ಕಲು ಗುಂಡುಗಳು, ಅಣಬೆಯಾಕಾರದ ಪುರಾತನ ಕಲ್ಲುಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ. ಪುನೀತ್ ರಾಜ್ ಕುಮಾರ್, ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಈ ವಿಸ್ಮಯ ಕಲ್ಲುಗಳನ್ನು ನೋಡಲು ಬಂದಿದ್ದಾರೆ. ಅಪ್ಪು ಅವರ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದಲ್ಲಿ ಗುಡೇಕೋಟೆಯ ವಿಸ್ಮಯ ಡೊಕ್ಕಲು ಗುಂಡುಗಳನ್ನು ತೋರಿಲಾಗಿದೆ. ಈ ವಿಸ್ಮಯ ಕಲ್ಲುಗಳು ಮೊದಲು ಬೆಳಕಿಗೆ ಬಂದಿದ್ದು ಕನ್ನಡಪ್ರಭದ ವರದಿಯ ಮೂಲಕ ಎಂಬುದು ಮತ್ತೊಂದು ವಿಶೇಷ.

ಕೋಟೆ ಕಟ್ಟಿ ಮೆರೆದ ಇಲ್ಲಿಯ ಪಾಳೇಗಾರರು, ಚಿತ್ರದುರ್ಗವನ್ನು ಹೈದರಾಲಿಯ ಸೈನಿಕರಿಂದ ರಕ್ಷಿಸಿ ಮದಕರಿ ನಾಯಕನ ಗೌರವ ಉಳಿಸಿದ್ದು ಅಲ್ಲದೇ ಇಡೀ ಹೆಣ್ಣುಕುಲಕ್ಕೆ ಗೌರವ ತಂದುಕೊಟ್ಟ ಓಬವ್ವ ಹುಟ್ಟಿ ಬೆಳೆದಿದ್ದು ಗುಡೇಕೋಟೆಯಾಗಿದೆ. ಅಲ್ಲದೇ ಚಿತ್ರದುರ್ಗದ ಮದಕರಿನಾಯಕನ ಪತ್ನಿ ಗುಡೇಕೋಟೆಯ ಪಾಳೇಗಾರರ ವಂಶಸ್ಥರು ಎಂಬುದು ಹೆಮ್ಮೆಯ ಸಂಗತಿ. 30 ಲಕ್ಷ ಅನುದಾನ: ಗುಡೇಕೋಟೆ ಉತ್ಸವದ ಮೂಲಕ ಸ್ಥಳೀಯರಿಗೇ ಅಪರಿಚಿತವಾಗಿರುವ ಐತಿಹಾಸಿಕ ನೆಲೆಗಳನ್ನು ಪರಿಚಯಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹30 ಲಕ್ಷ ಅನುದಾನ ನೀಡಿದ್ದು, 2 ದಿನಗಳ ಕಾಲ ಗುಡೇಕೋಟೆ ಉತ್ಸವ ನಡೆಯಲಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಜೀವವೈವಿಧ್ಯ: ಗುಡೇಕೋಟೆ ಕರಡಿಧಾಮದಲ್ಲಿ ಸಹಸ್ರಾರು ಜೀವವೈವಿಧ್ಯಗಳಿವೆ. ಅದರಂತೆ ಅಸಂಖ್ಯಾತ ನೈಸರ್ಗಿಕ ತಾಣಗಳಿವೆ. ಗುಡೇಕೋಟೆ ಕರಡಿಧಾಮ ಪ್ರದೇಶದಲ್ಲಿ ಜಲಪಾತಗಳಿಗೆ ಲೆಕ್ಕವಿಲ್ಲ. ಬೆರಗು ಮೂಡಿಸುವ ಬಂಡೆಗಳಿಗೆ ಕೊರತೆ ಇಲ್ಲ. ಅಳಿವಿನಂಚಿನ ಎಷ್ಟೋ ಪ್ರಾಣಿ, ಪಕ್ಷಿಗಳು ವಾಸಿಸುತ್ತಿವೆ ಎಂದು ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ ತಿಳಿಸಿದರು.