ಇದು ವೇತನ ನೀಡದೆ ನಮ್ಮನ್ನು ದುಡಿಸಿಕೊಳ್ಳುವ ತಂತ್ರದ ಜತೆಗೆ ನಮ್ಮ ಸ್ಥಾನ ಹಾಗೂ ಸೇವೆಗೆ ಮಾಡುತ್ತಿರುವ ಅಪಮಾನವಾಗಿದೆ.
ಕನಕಗಿರಿ: ಇಲ್ಲಿನ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನ ಅತಿಥಿ ಉಪನ್ಯಾಸಕರು ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಬಹಿಷ್ಕರಿಸಿ ಕಾಲೇಜಿನ ಪ್ರಾಂಶುಪಾಲರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಹಿರಿಯ ಉಪನ್ಯಾಸಕ ಅಮರೇಶ ವೆಂಕಟಾಪೂರ ಮಾತನಾಡಿ, ಹತ್ತು ತಿಂಗಳ ಅವಧಿಗೆ ಸೇವೆ ಪಡೆಯುವುದಾಗಿ ಹೇಳಿದ್ದ ಉನ್ನತ ಶಿಕ್ಷಣ ಇಲಾಖೆ ಇದೀಗ ಅವಧಿ ಪೂರ್ವ ಅತಿಥಿ ಉಪನ್ಯಾಸಕರನ್ನು ಬಿಡುಗಡೆಗೊಳಿಸಿದೆ. ಜಿಲ್ಲಾ ವಿಶ್ವವಿದ್ಯಾಲಯದಡಿ ಬರುವ ಪದವಿ ಕಾಲೇಜುಗಳ 2025-26ನೇ ಸಾಲಿನ ಶೈಕ್ಷಣಿಕ ಅವಧಿ ಮೇ 22ಕ್ಕೆ ಮುಕ್ತಾಯಗೊಂಡಿದ್ದು, ಇಲಾಖೆಯ ನಿರ್ದೇಶನದಂತೆ ಅದೇ ದಿನ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡುವ ಕೆಲಸವನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರುಗಳು ಮಾಡಿದ್ದು, ಜೂನ್‌ನಲ್ಲಿ ಪರೀಕ್ಷೆಗಳು ನಡೆಯಲಿವೆ ಜತೆಗೆ ಆ ಬಳಿಕ ಮೌಲ್ಯಮಾಪನ ಕೂಡ ನಡೆಯಲಿದೆ. ಈ ಎಲ್ಲ ಕೆಲಸಗಳಿಗೆ ಅತಿಥಿ ಉಪನ್ಯಾಸಕರ ಸೇವೆ ಬೇಕೇ ಬೇಕು.ಈ ಯಾವುದನ್ನೂ ಪರಿಗಣಿಸದೇ ಅಥವಾ ಆ ಬಗ್ಗೆ ಯೋಚಿಸದೇ ಅವಧಿ ಪೂರ್ವವಾಗಿ ಅತಿಥಿ ಉಪನ್ಯಾಸಕರನ್ನು ಬಿಡುಗಡೆಗೊಳಿಸುವ ಕಾರ್ಯ ಇಲಾಖೆ ಮಾಡಿದೆ. ಇದು ವೇತನ ನೀಡದೆ ನಮ್ಮನ್ನು ದುಡಿಸಿಕೊಳ್ಳುವ ತಂತ್ರದ ಜತೆಗೆ ನಮ್ಮ ಸ್ಥಾನ ಹಾಗೂ ಸೇವೆಗೆ ಮಾಡುತ್ತಿರುವ ಅಪಮಾನವಾಗಿದೆ. ಉನ್ನತ ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ನಮ್ಮ ಸೇವೆಯನ್ನು ಈ ಎಲ್ಲ ಕಾರ್ಯಗಳು ಮುಗಿಯುವವರೆಗೆ ಮುಂದುವರಿಸಬೇಕು. ಇಲ್ಲವಾದರೆ ನಾವು ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯ ಈ ಎರಡನ್ನೂ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಹಿರಿಯ ಅತಿಥಿ ಉಪನ್ಯಾಸಕ ವಿನಯ್ ಕುಮಾರ, ಸುರೇಶ್.ಪಿ, ಬೋರಯ್ಯ, ವಿಜಯ್ ಸರೋದೆ, ಬಾಲಪ್ಪ ಕುರಿ, ಬಸವರಾಜ ಚಿಗರಿ, ಹುಲಿಗೆಮ್ಮ, ನಿರುಪಾದಿ, ಶ್ರೀಕಾಂತ್, ರಮೇಶ ಗುರಿಕಾರ, ರಾಘವೇಂದ್ರ, ಕರಿಯಪ್ಪ, ಸೈಯದ್ ಇದಾಯತುಲ್ಲಾ ಸೇರಿದಂತೆ ಇದರ ಅತಿಥಿ ಉಪನ್ಯಾಸಕರು ಇದ್ದರು.