ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆಯಾದ ಕಾಯಂಗೆ ಆಗ್ರಹಿಸಿ ಡೀಸಿ ಕಚೇರಿ ಮುಂದೆ ನಡೆಸಲಾಗುತ್ತಿರುವ ಪ್ರತಿಭಟನಾ ಧರಣಿಯು ೩ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.ಅತಿಥಿ ಉಪನ್ಯಾಸಕರ ಮುಷ್ಕರದಿಂದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಳೆದ ಒಂದು ವಾರದಿಂದ ತರಗತಿಗಳು ನಡೆದಿರುವುದಿಲ್ಲ. ಪರೀಕ್ಷೆ ಪ್ರಾರಂಭವಾಗುವ ಸೂಚನೆ ನೀಡಿದ್ದು, ಇದು ವಿದ್ಯಾರ್ಥಿಗಳಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದರು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ ೧೫-೨೦ ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ, ಖಾಯಂಮಾತಿ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ಬದುಕು ನಡೆಸುವುದು ದುಸ್ತರವಾದ ಸಂಗತಿಯಾಗಿದೆ. ನಾವುಗಳು ಕಾಯಂಮಾತಿಗೆ ಹಲವಾರು ವರ್ಷಗಳ ಹೋರಾಟ ಮಾಡಿದರು ಯಾವುದೇ ಶಾಶ್ವತ ಪರಿಹಾರ ನೀಡದೆ, ಕೇವಲ ತಾತ್ಕಾಲಿಕ ಪರಿಹಾರವನ್ನು ನೀಡುವ ಮೂಲಕ ನಮ್ಮ ಬದುಕುಗಳನ್ನು ಹಿಂದಿನ ಎಲ್ಲಾ ಸರ್ಕಾರಗಳು ಕಸಿದುಕೊಳ್ಳುತ್ತಾ ಬಂದಿವೆ ಎಂದರು.
ಪ್ರಸ್ತುತ ಆಡಳಿತ ಸರ್ಕಾರ ಅತಿಥಿ ಉಪನ್ಯಾಸಕರ ಕಾಯಂಮಾತಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದರು. ಸರ್ಕಾರ ೬ ತಿಂಗಳುಗಳ ಕಾಲ ಆಡಳಿತ ನಡೆಸಿದರೂ ಇಲ್ಲಿಯವರೆಗೆ ಯಾವುದೇ ತೀರ್ಮಾನಗಳನ್ನ ತೆಗೆದುಕೊಂಡಿರುವುದಿಲ್ಲ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಕಾಯಂಮಾತಿ ಕಾರ್ಯಯೋಜನೆಯನ್ನು ರೂಪಿಸಲಾಗುತ್ತದೆಂದು ಘೋಷಿಸಬೇಕೇಂದು ಜಿಲ್ಲಾಧಿಕಾರಿಗಳ ಮೂಲಕ ಕಾಲೇಜು ಶಿಕ್ಷಣ ಇಲಾಖೆ, ಹಾಗೂ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಆಂದೋಲನವನ್ನು ನೀಡುತ್ತೇವೆ ಎಂದು ಅತಿಥಿ ಉಪನ್ಯಾಸಕರು ಹೇಳಿದರು.ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಸುನೀತಾ, ಸುರೇಶ್, ಮಹಮ್ಮದ್ ಆರೀಫ್ ಕಾರ್ಲೇ, ಅರಸೀಹಳ್ಳಿ ಮಂಜುನಾಥ್, ದರಣೇಂದ್ರ, ಚೇತನ್, ಕುಮಾರ್, ಮಂಜೇಗೌಡ, ಇತರರು ಉಪಸ್ಥಿತರಿದ್ದರು.