ಗೌರವಧನ ಬಿಡುಗಡೆಗೆ ಒತ್ತಾಯಿಸಿ ಅತಿಥಿ ಶಿಕ್ಷಕರ ಪ್ರತಿಭಟನೆ

| Published : Dec 10 2024, 12:30 AM IST

ಗೌರವಧನ ಬಿಡುಗಡೆಗೆ ಒತ್ತಾಯಿಸಿ ಅತಿಥಿ ಶಿಕ್ಷಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪ್ರಮುಖ ಬೀದಿಯಿಂದ ಪ್ರಾರಂಭಗೊ೦ಡ ಪ್ರತಿಭಟನಾ ಮೆರವಣಿಗೆ ಬಿಇಒ ಕಚೇರಿ ವರೆಗೆ ಸಾಗಿ ಆವರಣದಲ್ಲಿ ಸಮಾವೇಶಗೊಂಡಿತು.

ಕುರುಗೋಡು: ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲೂಕು ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರಮುಖ ಬೀದಿಯಿಂದ ಪ್ರಾರಂಭಗೊ೦ಡ ಪ್ರತಿಭಟನಾ ಮೆರವಣಿಗೆ ಬಿಇಒ ಕಚೇರಿ ವರೆಗೆ ಸಾಗಿ ಆವರಣದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ಗೌರವಧನ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.

ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಕುರುಗೋಡು ಬಿಇಒ ಕಚೇರಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ೩೮೦ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಆರು ತಿಂಗಳಿ೦ದ ಗೌರವಧನ ಬಿಡುಗಡೆಯಾಗಿಲ್ಲ. ಪರಿಣಾಮ ಇದನ್ನೇ ನಂಬಿಕೊ೦ಡಿರುವ ಅತಿಥಿ ಶಿಕ್ಷಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಗೌರವಧನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ಘಟಕದ ಅಧ್ಯಕ್ಷ ಶಿವನೇಗೌಡರ ರಾಮಪ್ಪ ಮಾತನಾಡಿ, ಏಳು ತಿಂಗಳಾದರೂ ಗೌರವಧನ ಬಿಡುಗಡೆಯಾಗದಿರುವುದರಿಂದ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ. ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡುವ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಸೇವೆಗೆ ಗೈರುಹಾಜರಾಗಿ ಪ್ರತಿಭಟನೆ ನಡೆಸಬೇಕಾಯಿತು. ಕೂಡಲೇ ಸಮಸ್ಯೆ ಬಗೆಹರಿಸಿ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಿಇಒ ಸಿದ್ಧಲಿಂಗಮೂರ್ತಿ, ತಾಂತ್ರಿಕ ದೋಷದಿಂದ ಗೌರವಧನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಒಂದು ವಾರದೊಳಗೆ ಗೌರವಧನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬಿಇಒ ಅವರ ಮನವಿಯ ಮೇರೆಗೆ ಅತಿಥಿ ಶಿಕ್ಷಕರು ಪ್ರತಿಭಟನೆ ಹಿಂದಕ್ಕೆ ಪಡೆದರು. ಅತಿಥಿ ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷೆ ಶಿವಗಂಗಮ್ಮ, ಪದಾಧಿಕಾರಿಗಳಾದ ಶಿವರುದ್ರಪ್ಪ, ಮಾರೆಣ್ಣ, ತಿಪ್ಪೇಸ್ವಾಮಿ, ಪಂಪಾಪತಿ, ಶ್ರೀನಿವಾಸ, ಶಿವಕುಮಾರ್, ಜಿ. ಎರಿಸ್ವಾಮಿ, ಶಂಕ್ರಮ್ಮ, ಮಲ್ಲಿಕಾ, ಶೇಖಣ್ಣ, ವೆಂಕಟೇಶ್, ಲೋಕೇಶ್, ನಿರುಪಾದಯ್ಯ, ಮಲ್ಲಮ್ಮ, ಶಾಂತಪ್ಪ ಮತ್ತು ಅಂಜಿನಪ್ಪ ಇದ್ದರು.

ಕುರುಗೋಡು ತಾಲೂಕು ಬಿಇಒ ಕಚೇರಿ ವರೆಗೆ ಅತಿಥಿ ಶಿಕ್ಷಕರು ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೆರವಣಿಗೆ ಪ್ರತಿಭಟನಾ ನಡೆಸಿದರು.