ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ನಡೆಯುತ್ತಿರುವ ಪ್ರೇರಣಾ ಉತ್ಸವ ನಿಮಿತ್ತ ಬುಧವಾರ ಬೆಳಗ್ಗೆ ಗುಗ್ಗುಳೋತ್ಸವ, ಪಲ್ಲಕ್ಕಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆದವು.ಬೆಳಗ್ಗೆ 8ಕ್ಕೆ ಪಟ್ಟಣದ ಮಹಾದೇವ ಮಂದಿರದಿಂದ ಸಾಮೂಹಿಕ ಗುಗ್ಗುಳೋತ್ಸವ ಮತ್ತು ಜ್ಯೋತಿಬಾ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ದೊರೆತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಣದಿ ಕ್ಯಾಂಪಸ್ ನಲ್ಲಿರುವ ಜ್ಯೋತಿರ್ಲಿಗ ದೇವಸ್ಥಾನ ತಲುಪಿತು.
ಮೆರವಣಿಗೆಯುದ್ದಕ್ಕೂ ನಾಡಿನ ಬೇರೆ ಬೇರೆ ಕಡೆಯಿಂದ ಆಗಮಿಸಿದ ಕರಡಿ ಮಜಲು, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಚಂಡಿ ವಾದ್ಯ, ನಂದಿ ಧ್ವಜ, ಪುರವಂತರ ಕುಣಿತಗಳು ಮೆರಗು ನೀಡಿದವು. ಗುಗ್ಗಳೋತ್ಸವದಲ್ಲಿ 40ಕ್ಕೂ ಹೆಚ್ಚು ಜೋಡಿಗಳು ಭಾಗವಹಿಸಿ ಭಕ್ತಿ ಮೆರೆದರು. ಸಹಸ್ರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಜ್ಯೋತಿಬಾ ಪಲ್ಲಕ್ಕಿ ಹಾಗೂ ಗುಗ್ಗುಳೋತ್ಸವ ಆಗಮಿಸುವ ಹಿನ್ನೆಲೆಯಲ್ಲಿ ಯಕ್ಸಂಬಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದರು. ಮೆರವಣಿಗೆ ಸಾಗುತ್ತಿದ್ದಂತೆಯೇ ಜನರು ಕೈ ಮುಗಿದು ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಮೆರವಣಿಗೆಯು ಜ್ಯೋತಿರ್ಲಿಂಗ ದೇವಸ್ಥಾನ ತಲುಪಿತು. ಬಳಿಕ ಮಹಾಪ್ರಸಾದ ಸೇವೆ ಜರುಗಿತು.
ಸಾನ್ನಿಧ್ಯವನ್ನು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ, ನಿಪ್ಪಾಣಿಯ ಮುರುಘೇಂದ್ರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭದಲ್ಲಿ ಪಲ್ಲಕ್ಕಿ, ನಂದಿಧ್ವಜ ಹಾಗೂ ಗುಗ್ಗಳೋತ್ಸವಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಯುವ ಮುಖಂಡ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ದಂಪತಿ ಸೇರಿದಂತೆ ಜೊಲ್ಲೆ ಪರಿವಾರದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಮುಖ್ಯ ಕಚೇರಿಯ ಅಧ್ಯಕ್ಷ ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ, ಶಂಕರ ರೇಂದಾಳೆ, ಜೊಲ್ಲೆ ಗ್ರುಪ್ ಸಿಇಒ ವಿಜಯ ರಾವುತ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜಯಕುಮಾರ ಖೋತ, ಶಂಕರ ರೇಂದಾಳೆ, ಮನೋಹರ ಕುಪ್ಪಾನಟ್ಟಿ ಇತರರು ಉಪಸ್ಥಿತರಿದ್ದರು.