ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಪಿಯು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಡೂರು: ಪಟ್ಟಣದ ಬಿಕೆಜಿ ಪಿಯು ಕಾಲೇಜಿನಲ್ಲಿ ಭಾನುವಾರ ನೀಟ್, ಕೆಸೆಟ್, ಜೆಇಇ ಹಾಗೂ ಕಾಮೆಡ್ ಕೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಪಿಯು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಮತ್ತು ವೃತ್ತಿ ಆಯ್ಕೆ ಅತ್ಯಂತ ಮಹತ್ವದ ಹಂತವಾಗಿದೆ. ಈ ಸಂದರ್ಭದಲ್ಲಿ ಸರಿಯಾದ ಮಾಹಿತಿ ಹಾಗೂ ನಿಖರ ಮಾರ್ಗದರ್ಶನ ದೊರಕಿದರೆ ವಿದ್ಯಾರ್ಥಿಗಳ ಭವಿಷ್ಯ ಯಶಸ್ವಿಯಾಗುತ್ತದೆ ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದಿ ಕ್ವೀನ್ಸ್ ಸಂಸ್ಥೆಯ ಸಿಇಒ ಕೊಟ್ರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ತಮ್ಮ ಅನುಭವಾಧಾರಿತ ಮಾತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ರ‍್ಯಾಂಕ್ ಪಾತ್ರ, ಸರಿಯಾದ ತಂತ್ರದೊಂದಿಗೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ವಿಧಾನ ಹಾಗೂ ಭವಿಷ್ಯದ ವೃತ್ತಿ ಯೋಜನೆ ಕುರಿತು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಅಮೂಲ್ಯವಾದ ಮಾಹಿತಿಯನ್ನು ನೀಡಿದರು.

ಬಿಕೆಜಿ ಪಿಯು ಕಾಲೇಜಿನ ಪ್ರಾಚಾರ್ಯ ಕೆ.ವಿ. ಮೋಹನ್‌ರಾವ್ ಶಿಸ್ತುಬದ್ಧ ಅಧ್ಯಯನ, ಸಮಯ ನಿರ್ವಹಣೆ ಮತ್ತು ತಿಳಿದ ನಿರ್ಧಾರಗಳ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಪೋಷಕರಿಗೂ ಸ್ಪಷ್ಟತೆ ನೀಡಿದರು.

ಸಭೆಯಲ್ಲಿ ನೀಟ್, ಕೆಸೆಟ್, ಜೆಇಇ ಹಾಗೂ ಕಾಮೆಡ್ ಕೆ ಪರೀಕ್ಷೆಗಳ ರಚನೆ, ಅರ್ಹತೆ, ಮೆರಿಟ್ ರ‍್ಯಾಂಕ್ ಮಹತ್ವ ಹಾಗೂ ಪ್ರವೇಶಾವಕಾಶಗಳು, ಕೌನ್ಸೆಲಿಂಗ್ ಪ್ರಕ್ರಿಯೆಯ ಹಂತಹಂತದ ವಿವರ, ನೋಂದಣಿ, ಆಯ್ದೆ ಭರ್ತಿ, ಮಾಕ್ ಅಲಾಟ್‌ಮೆಂಟ್, ಅಂತಿಮ ಸೀಟ್ ಹಂಚಿಕೆ, ಪ್ರವೇಶ ದೃಢೀಕರಣ, ಕಾಲೇಜು ಆಯ್ಕೆ, ಸೀಟ್ ಹಂಚಿಕೆ, ಕಟ್ ಆಫ್ ರ‍್ಯಾಂಕ್, ಮೀಸಲಾತಿ ನಿಯಮಗಳು, ಹಿಂದಿನ ವರ್ಷದ ಕಟ್ ಆಫ್ ಮಾಹಿತಿ, ದ್ವಿತಿಯ ಪಿಯುಸಿ ನಂತರದ ವೃತ್ತಿ ಮಾರ್ಗದರ್ಶನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಂತೆ ತಮಗಿರುವ ಸಂಶಯಗಳಿಗೆ ತಜ್ಞರಿಂದ ಉತ್ತರವನ್ನು ಪಡೆದುಕೊಂಡರು.