ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಕಲಿಕೆಗೆ ಸಂಬಂಧಿಸಿದಂತೆ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಗುರುತಿಸಿ ಅವರಿಗೆ ವೈಯಕ್ತಿಕ ಕಾಳಜಿ ಮತ್ತು ಮಾರ್ಗದರ್ಶನ ನೀಡಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಡೆಗಣಿಸದೆ ವಿಶ್ವಾಸಕ್ಕೆ ಪಡೆದುಕೊಂಡು ಬೋಧಿಸಬೇಕು ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.
ನಗರದ ಗುರುಭವನದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಂಗ್ಲಭಾಷಾ ಶಿಕ್ಷಕರ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಗ್ಲಿಷ್ ಭಾಷೆಯ ಪಠ್ಯ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮವಿಶ್ವಾಸ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ನಿರಂತರ ಅಭ್ಯಾಸ ಮತ್ತು ಗುರಿಯೊಂದೇ ನಿಮ್ಮ ಧ್ಯೇಯವಾಗಿರಲಿ.
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜಾತ್ರೆ, ಹಬ್ಬ, ಟಿವಿ, ಮೊಬೈಲ್ ಸಂಪರ್ಕದಿಂದ ದೂರ ಉಳಿದು ಅದೇ ಸಮಯವನ್ನು ಅಭ್ಯಾಸಕ್ಕೆ ಬಳಸಿಕೊಳ್ಳಬೇಕು. ಅಂಕ ಗಳಿಸುವ ಭರದಲ್ಲಿ ಆರೋಗ್ಯ ಕಡೆಗಣಿಸಬಾರದು.
ಆಯಾ ವಿಷಯಗಳಲ್ಲಿ ನಿಮಗಿರುವ ಗೊಂದಲಗಳನ್ನು ಪರೀಕ್ಷೆ ಮುಗಿಯುವವರೆಗೂ ಶಿಕ್ಷಕರ ಸಂಪರ್ಕದಲ್ಲಿದ್ದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಮಂಜಪ್ಪ ಆರ್. ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಬಾರಿ ಮೂರು ಮುಖ್ಯ ಪರೀಕ್ಷೆಗಳನ್ನು ಬರೆಯುವ ಅವಕಾಶ ಕಲ್ಪಿಸಲಾಗಿದೆ.
ಮೊದಲ ಮುಖ್ಯ ಪರೀಕ್ಷೆಗೆ ಗೈರಾದ ಮಕ್ಕಳು ಸೇರಿದಂತೆ ಕಡಿಮೆ ಅಂಕ ಬಂದಿರುವ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ಮುಖ್ಯ ಪರೀಕ್ಷೆಯ ಅವಕಾಶ ಬಳಸಿಕೊಳ್ಳಬಹುದು.
ಮೊದಲ ಮುಖ್ಯ ಪರೀಕ್ಷೆಗೆ ಒತ್ತು ನೀಡುವುದು ಉತ್ತಮ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸ್ನೇಹಿ ಪರೀಕ್ಷೆ ನಡೆಸಲಾಗುತ್ತದೆ.
ಯಾವ ಗೊಂದಲಗಳಿಗೆ ಒಳಗಾಗದೆ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಂಗ್ಲಿಷ್ ವಿಷಯ ಪರಿವೀಕ್ಷಕ ದೇವೇಂದ್ರಪ್ಪ ಬಸಮ್ಮನವರ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಪ್ರತಿಜ್ಞೆ ಮಾಡಬೇಕು. ಪ್ರಾಮಾಣಿಕ ಪ್ರಯತ್ನದಿಂದ ನಿರೀಕ್ಷಿತ ಪ್ರತಿಫಲ ದೊರೆಯಲಿದೆ.
ಸಿಬಿಸಿ ಮತ್ತು ರಸಪ್ರಶ್ನೆ ಸ್ಪರ್ಧೆಯ ಮೂಲಕ ನಿಮ್ಮೊಳಗೆ ಹುದುಗಿರುವ ಪ್ರತಿಭೆ ಹೊರಗೆಳೆಯುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಶಿಕ್ಷಕರು ಮತ್ತು ಪಾಲಕರು ಪಟ್ಟಶ್ರಮ ವ್ಯರ್ಥವಾಗಲು ಬಿಡದಂತೆ ದೃಢ ಸಂಕಲ್ಪದೊಂದಿಗೆ ಅಭ್ಯಾಸ ಮಾಡಿ. ನಿಮ್ಮ ಮುಂದೆ ಗುರಿ ಮಾತ್ರ ಕಾಣಿಸಬೇಕು.
ಋಣಾತ್ಮಕ ಮನೋಧೋರಣೆ ಬಿಟ್ಟು ಸಕಾರಾತ್ಮಕ ಮನೋಭಾವದಿಂದ ಯೋಚಿಸಿ. ಸಾಧಿಸುವ ಛಲವುಳ್ಳ ನೀವು ಪರ್ವತ ಹತ್ತುವ ಹಂಬಲ ಮತ್ತು ಕನಸನ್ನು ಸದಾ ಕಾಣುತ್ತಿರಬೇಕು ಎಂದು ಪ್ರೋತ್ಸಾಹಿಸಿದರು.
ಕ್ವಿಜ್ ಮಾಸ್ಟರ್ ಚಂದ್ರುಗೌಡ ಪಾಟೀಲ, ಕುಮಾರ್ ಕಾಳೆ, ಆನಂದ ದೇಸಾಯಿ ನಿರ್ವಹಣೆ ಮಾಡಿದ ಡಿಜಿಟಲ್ ಕ್ವಿಜ್ ಮಾದರಿ ಮಕ್ಕಳು ಮತ್ತು ಶಿಕ್ಷಕರ ಮನಸೊರೆಗೊಂಡಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಗಣಿತ ವಿಷಯ ಪರಿವೀಕ್ಷಕ ಬಿ.ಎಸ್. ಪಾಟೀಲ, ಎಸ್.ಪಿ. ಮೂಡಲದವರ, ಬಿ.ಎಂ. ಬೇವಿನಮರದ, ಇಸಿಒ ಸಿಕಂದರ್ ಮುಲ್ಲಾ, ಜಿಲ್ಲಾ ಆಂಗ್ಲಭಾಷಾ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷ ಎ.ಸಿ. ಸಂಕಣ್ಣನವರ, ಅಧ್ಯಕ್ಷ ಎಫ್.ಬಿ. ಮರಡೂರ.
ಕಾರ್ಯದರ್ಶಿ ರಾಕೇಶ್ ಜಿಗಳಿ, ಖಜಾಂಚಿ ಗುರುರಾಜ ಹುಚ್ಚಣ್ಣನವರ, ಜಗದೀಶ ಮಳೀಮಠ, ವಸಂತರಾವ್ ಪಾಟೀಲ, ಜಗದೀಶ ಗೋಣಗೇರಿ, ಮಂಜುನಾಥ ಚೂರಿ, ಪದ್ಮಾವತಿ ಕಲ್ಲು, ಗೀತಾ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))