ಹೊಸ ವರ್ಷ ಸಂಭ್ರಮಾಚರಣೆ ವೇಳೆ ಮಾರ್ಗಸೂಚಿಗಳ ಪಾಲಿಸಿ

| Published : Dec 30 2023, 01:15 AM IST

ಹೊಸ ವರ್ಷ ಸಂಭ್ರಮಾಚರಣೆ ವೇಳೆ ಮಾರ್ಗಸೂಚಿಗಳ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

2024 ಅನ್ನು ವಿಶಿಷ್ಟವಾಗಿ ಸ್ವಾಗತಿಸಲು ಜಗತ್ತೇ ತುದಿಗಾಲ ಮೇಲೆ ನಿಂತು ಸಿದ್ಧಗೊಳ್ಳುತ್ತಿದೆ. ಇದರಿಂದ ಶಿವಮೊಗ್ಗವೂ ಹೊರತಲ್ಲ. ಹಾಗಾಗಿ, ಹೊಸ ವರ್ಷ ಸಂಭ್ರಮದಲ್ಲಿ ಪೊಲೀಸರ ಮಾರ್ಗದರ್ಶನ ಮೀರದಂತೆ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್‌ ಸಲಹೆ, ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ದತೆಗಳು ಜೋರಾಗಿದ್ದು, ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಹೊಸ ವರ್ಷಾಚರಣೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಸಭೆ ನಡೆಸಿ ಕೆಲವೊಂದು ಸೂಚನೆ ನೀಡಿದ್ದಾರೆ.

ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಗುರುವಾರ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ತಮ್ಮ ನೇತೃತ್ವದಲ್ಲಿ ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆ ನಡೆಸಿದರು.

ಹೊಸ ವರ್ಷ ಆಚರಣೆ ಸಮಾರಂಭವನ್ನು ಶಿಸ್ತಿನಿಂದ, ಸಮಯ ಮಿತಿಯೊಳಗೆ ಆಚರಿಸಬೇಕು. ರಾತ್ರಿ 1 ಗಂಟೆಯ ಒಳಗಾಗಿ ಸಂಭ್ರಮಾಚರಣೆ ಮುಕ್ತಾಯಗೊಳಿಸಬೇಕು. ವಾಹನಗಳ ಸುರಕ್ಷತೆಯ ದೃಷ್ಠಿಯಿಂದ ಮದ್ಯಪಾನ ಮಾಡದೇ ಇರುವವರು ಮಾತ್ರ ವಾಹನ ಚಾಲನೆ ಮಾಡಬೇಕು. ಸುಪ್ರೀಂ ಕೋರ್ಟ್‌ ಆದೇಶದಂತೆ ಹೊರಾಂಗಣದ ಸಂಭ್ರಮಾಚರಣೆಗಳಲ್ಲಿ ರಾತ್ರಿ 10 ಗಂಟೆಯವರೆಗೆ ನಿಗದಿಪಡಿಸಿದ ಶಬ್ದಮಿತಿಯ ಒಳಗೆ ಸೌಂಡ್ ಸಿಸ್ಟಂಗಳನ್ನು ಬಳಸಬೇಕು. ರಾತ್ರಿ 10 ಗಂಟೆಯ ನಂತರ ಕೇವಲ ಒಳಾಂಗಣ ಸಂಭ್ರಮಾಚರಣೆಗಳಲ್ಲಿ ಮಾತ್ರ ಶಬ್ದಮಿತಿ ಒಳಗೆ ಸೌಂಡ್ ಸಿಸ್ಟಂಗಳನ್ನು ಬಳಸಬೇಕು ಎಂದು ಸೂಚನೆ ನೀಡಿದ್ದಾರೆ.

ನಿಮಯಗಳೇನು?:

ಹೊಸ ವರ್ಷ ಆಚರಣೆ ಸಮಾರಂಭದ ಆಯೋಜಕರು, ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಕಾನೂನುನಿನ ಚೌಕಟ್ಟಿನ ಒಳಗೆ ಕಾರ್ಯಕ್ರಮ ನಡೆಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು. ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವವರ ಸುರಕ್ಷತೆಯ ದೃಷ್ಠಿಯಿಂದ ಸುರಕ್ಷಿತವಾದ ಸ್ಥಳಗಳಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ಸಾರ್ವಜನಿಕರ ಹಿತ ದೃಷ್ಠಿಯಿಂದ, ಸಂಭ್ರಮಾಚರಣೆಯನ್ನು ಕಾರ್ಯಕ್ರಮ ಆಯೋಜಿಸಿರುವ ಸ್ಥಳದ ಹೊರಗಡೆ, ರಸ್ತೆಬದಿಗಳಲ್ಲಿ ಮಾಡದೇ, ನಿಗದೀಪಡಿಸಿರುವ ಸ್ಥಳದ ಒಳಗಡೆಯೇ ಆಚರಣೆ ಮಾಡುವಂತೆ ನೋಡಿಕೊಳ್ಳುವುದು ಆಯೋಜಕರ ಜವಾಬ್ದಾರಿ. ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್ ಇದ್ದರು.

- - -

-28ಎಸ್‌ಎಂಜಿಕೆಪಿ02:

ಶಿವಮೊಗ್ಗದ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಗುರುವಾರ ನಡೆದ ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರು, ವ್ಯವಸ್ಥಾಪಕರ ಸಭೆಯಲ್ಲಿ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ಮಾತನಾಡಿದರು.